ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್‌ ಪ್ರಸಾದ್ ನಿಯೋಜನೆಗೆ ಸಿದ್ಧತೆ

Update: 2018-06-19 14:06 GMT

ಬೆಂಗಳೂರು, ಜೂ.19: ಬೃಹತ್ ಬೆಂಗಳೂರು ಮಹಾನಗರದ ನೂತನ ಆಯುಕ್ತ ಮಹೇಶ್ವರರಾವ್ ಕಾರ್ಯವೈಖರಿ ವಿರುದ್ಧ ಅಸಮಾಧಾನ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಿ, ಹಿಂದಿನ ಆಯುಕ್ತ ಮಂಜುನಾಥ್‌ಪ್ರಸಾದ್‌ರನ್ನೇ ನಿಯೋಜನೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಮುಖ್ಯ ಚುನಾವಣಾಧಿಕಾರಿಗಳು ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ವರ್ಗಾವಣೆ ಮಾಡಿ ಮಹೇಶ್ವರ್‌ರಾವ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಿದ್ದರು. ಚುನಾವಣಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಮಹೇಶ್ವರ್‌ರಾವ್ ಬಿಬಿಎಂಪಿ ಕೇಂದ್ರ ಕಚೇರಿಯತ್ತ ತಲೆ ಕೂಡ ಹಾಕಿರಲಿಲ್ಲ ಎನ್ನಲಾಗಿದೆ.

ಅಲ್ಲದೆ, ನಗರದ ಪ್ರಮುಖ ಸಮಸ್ಯೆಗಳ ನಿವಾರಣೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತು ಪಾಲಿಕೆ ಸದಸ್ಯರ ಕೈಗೆ ಸಿಗದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅವರ ಗೈರಿನಲ್ಲೇ ಪಾಲಿಕೆ ಸಭೆ ಕೂಡ ನಡೆದಿತ್ತು. ಹೀಗಾಗಿ, ಕೂಡಲೇ ಮಹೇಶ್ವರ್‌ರಾವ್‌ರನ್ನು ವರ್ಗಾವಣೆ ಮಾಡಿ ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸರಕಾರವನ್ನು ಒತ್ತಾಯಿಸಿದ್ದರು.

ಇದರ ಜತೆಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಮಹೇಶ್ವರ್‌ರಾವ್ ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲು ಸರಕಾರ ತೀರ್ಮಾನಿಸಿದ್ದು, ಮತ್ತೆ ಮಂಜುನಾಥ್ ಪ್ರಸಾದ್‌ರನ್ನು ಕರೆ ತರಲು ಸಿದ್ಧತೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳ ಸಹಿ ಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News