ಮಹಾರಾಷ್ಟ್ರ ಮಕ್ಕಳ ಹಕ್ಕು ಸಂಸ್ಥೆಯಿಂದ ರಾಹುಲ್‌ಗೆ ನೋಟಿಸ್

Update: 2018-06-20 04:03 GMT

ಮುಂಬೈ, ಜೂ. 20: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಮೂವರು ದಲಿತ ಬಾಲಕರನ್ನು ಬೆತ್ತಲುಗೊಳಿಸಿ ಥಳಿಸಿದ್ದಲ್ಲದೇ ನಗ್ನ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಬಾಲಕರ ಗುರುತು ಬಹಿರಂಗಪಡಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎಂಎಸ್‌ಸಿಪಿಸಿಆರ್) ಶೋಕಾಸ್ ನೋಟಿಸ್ ನೀಡಿದೆ.

ಮುಂಬೈ ನಿವಾಸಿಯೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಈ ನೋಟಿಸ್ ನೀಡಲಾಗಿದೆ. ಘಟನೆ ಬಗೆಗಿನ ವೀಡಿಯೊ ದೃಶ್ಯಾವಳಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ರಾಹುಲ್ ಅಪ್‌ಲೋಡ್ ಮಾಡಿದ್ದರು. 

ಎಂಎಸ್‌ಸಿಪಿಸಿಆರ್ ಅಧ್ಯಕ್ಷ ಪ್ರವೀಣ್ ಘೂಗೆ ಜೂ. 19ರಂದು ನೋಟಿಸ್ ನೀಡಿದ್ದು, ಬಾಲನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯ್ದೆ ಮತ್ತು ಲೈಂಗಿಕ ಶೋಷಣೆಯಿಂದ ಮಕ್ಕಳ ಸಂರಕ್ಷಣೆ ಕಾಯ್ದೆಯ ಸೆಕ್ಷನ್ ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ.

"ಈ ವೀಡಿಯೊ ಆ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ಟ್ವೀಟ್ ಮಾಡಿರುವುದು ಕೇವಲ ಕಾಂಗ್ರೆಸ್ ಅಧ್ಯಕ್ಷ ಮಾತ್ರವಲ್ಲ. ಅದಕ್ಕಿಂತ ಹೆಚ್ಚಾಗಿ ನೈಜ ಸಮಸ್ಯೆಯಿಂದ ಜನರ ಗಮನವನ್ನು ವಿಮುಖಗೊಳಿಸುವ ಸಲುವಾಗಿ ಬಿಜೆಪಿ ಮಾಡಿದ ಉದ್ದೇಶಪೂರ್ವಕ ಪ್ರಯತ್ನ ಇದು. ವಾಸ್ತವವಾಗಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ" ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News