ಜಿಎಸ್‌ಟಿ ಜೊತೆ ವ್ಯಾಟ್: ಗ್ರಾಹಕರ ಕೈ ಸುಡಲಿದೆ ಪೆಟ್ರೋಲ್, ಡೀಸೆಲ್

Update: 2018-06-20 13:56 GMT

 ಹೊಸದಿಲ್ಲಿ,ಜೂ.20: ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಸೇರಿದರೆ ಗರಿಷ್ಠ ಶೇ.28 ತೆರಿಗೆಯ ಜೊತೆಗೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ್ನೂ ಗ್ರಾಹಕರು ಪಾವತಿಸಬೇಕಾಗಬಹುದು ಎಂದು ಹಿರಿಯ ಸರಕಾರಿ ಅಧಿಕಾರಿ ಯೋರ್ವರು ಬುಧವಾರ ಇಲ್ಲಿ ತಿಳಿಸಿದರು.

ಗರಿಷ್ಠ ಜಿಎಸ್‌ಟಿ ದರ ಮತ್ತು ವ್ಯಾಟ್ ಸೇರಿದರೆ ಅದು ಇವೆರಡೂ ಇಂಧನಗಳ ಮೇಲೆ ಕೇಂದ್ರ ಸರಕಾರದ ಅಬಕಾರಿ ಸುಂಕ ಮತ್ತು ರಾಜ್ಯ ಸರಕಾರಗಳು ವಿಧಿಸುತ್ತಿರುವ ವ್ಯಾಟ್ ಅನ್ನು ಒಳಗೊಂಡಿರುವ ಸದ್ಯದ ತೆರಿಗೆಗೆ ಸಮನಾಗುತ್ತದೆ.

ಆದರೆ ಇವೆರಡೂ ಇಂಧನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಮುನ್ನ ಪೆಟ್ರೋಲ್, ಡೀಸಿಲ್,ನೈಸರ್ಗಿಕ ಅನಿಲ,ವೈಮಾನಿಕ ಇಂಧನ ಮತ್ತು ಕಚ್ಚಾತೈಲಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸುವ ಮೂಲಕ ತಾನು ಗಳಿಸುತ್ತಿರುವ ಸುಮಾರು 20,000 ಕೋ.ರೂ.ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ್ನು ತ್ಯಾಗ ಮಾಡಲು ಕೇಂದ್ರವು ನಿರ್ಧರಿಸಬೇಕಾಗುತ್ತದೆ ಎಂದು ತಿಳಿಸಿದ ಅಧಿಕಾರಿ,ಪೆಟ್ರೋಲ್ ಮತ್ತು ಡೀಸಿಲ್ ಮೇಲೆ ಕೇವಲ ಜಿಎಸ್‌ಟಿಯನ್ನು ವಿಧಿಸುವ ಪದ್ಧತಿ ವಿಶ್ವದಲ್ಲೆಲ್ಲೂ ಇಲ್ಲ. ಹೀಗಾಗಿ ಭಾರತದಲ್ಲಿಯೂ ಜಿಎಸ್‌ಟಿ ಜೊತೆಗೆ ವ್ಯಾಟ್ ಕೂಡ ಸೇರಿಕೊಳ್ಳಲಿದೆ ಎಂದರು.

ಪೆಟ್ರೋಲಿಯಂ ಉತ್ಪನ್ನಗಳನ್ನು ಯಾವಾಗ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎನ್ನುವುದು ರಾಜಕೀಯ ನಿರ್ಧಾರವಾಗಿದ್ದು,ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಆ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

  ಕೇಂದ್ರವು ಹಾಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48 ರೂ. ಮತ್ತು ಡೀಸಿಲ್ ಮೇಲೆ 15.33 ರೂ. ಅಬಕಾರಿ ಸುಂಕವನ್ನು ವಿಧಿಸುತ್ತಿದೆ. ಇದರೊಂದಿಗೆ ರಾಜ್ಯಗಳು ವ್ಯಾಟ್ ವಿಧಿಸುತ್ತಿವೆ. ಅತ್ಯಂತ ಕಡಿಮೆ ವ್ಯಾಟ್ ಅನ್ನು ಅಂಡಮಾನ ಮತ್ತು ನಿಕೋಬಾರ ದ್ವೀಪಸಮೂಹದಲ್ಲಿ ವಿಧಿಸಲಾಗುತ್ತಿದೆ. ಅಲ್ಲಿ ಪೆಟ್ರೋಲ್ ಮತ್ತು ಡೀಸಿಲ್‌ಗಳಿಗೆ ಶೇ.6ರಷ್ಟು ಮಾರಾಟ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಪೆಟ್ರೋಲ್ ಮೇಲೆ ಗರಿಷ್ಠ ವ್ಯಾಟ್(ಶೇ.39.12) ಮುಂಬೈನಲ್ಲಿ ವಿಧಿಸಲಾಗುತ್ತಿದ್ದರೆ,ಡೀಸಿಲ್ ಮೇಲೆ ಗರಿಷ್ಠ ವ್ಯಾಟ್(ಶೇ.26) ಅನ್ನು ತೆಲಂಗಾಣದಲ್ಲಿ ಹೇರಲಾಗುತ್ತಿದೆ. ದಿಲ್ಲಿಯಲ್ಲಿ ಪೆಟ್ರೋಲ್‌ಗೆ ಶೇ.27 ಮತ್ತು ಡೀಸಿಲ್‌ಗೆ ಶೇ.17.24 ವ್ಯಾಟ್ ವಿಧಿಸಲಾಗುತ್ತದೆ.

ಪೆಟ್ರೋಲ್ ಮೇಲೆ ಸದ್ಯದ ಒಟ್ಟೂ ತೆರಿಗೆ ಪ್ರಮಾಣ ಶೇ.45 ರಿಂದ ಶೇ.50 ರಷ್ಟಿದ್ದರೆ ಡೀಸಿಲ್ ಮೇಲೆ ಶೇ.35ರಿಂದ ಶೇ.40ರಷ್ಟಿದೆ.

 ಜಿಎಸ್‌ಟಿಯಡಿ ಯಾವುದೇ ಸರಕು ಅಥವಾ ಸೇವೆಯ ಮೆಲಿನ ಒಟ್ಟು ತೆರಿಗೆಯನ್ನು ಜಿಎಸ್‌ಟಿ ಜಾರಿಗೆ ಬಂದ 2017,ಜು.1ಕ್ಕೆ ಮೊದಲು ಅದರ ಮೇಲೆ ವಿಧಿಸಲಾಗುತ್ತಿದ್ದ ಕೇಂದ್ರ ಮತ್ತು ರಾಜ್ಯ ತೆರಿಗೆಗಳ ಮೊತ್ತದ ಮಟ್ಟದಲ್ಲಿಯೇ ನಿಗದಿಗೊಳಿಸಲಾಗಿದೆ. ಆದರೆ ಪೆಟ್ರೋಲ್ ಮತ್ತು ಡೀಸಿಲ್ ಮೇಲಿನ ಸದ್ಯದ ಒಟ್ಟು ತೆರಿಗೆಯ ಪ್ರಮಾಣ ಜಿಎಸ್‌ಟಿಯ ಗರಿಷ್ಠ ತೆರಿಗೆ ಹಂತವಾಗಿರುವ ಶೇ.28ನ್ನು ಮೀರಿರುವುದರಿಂದ ಜಿಎಸ್‌ಟಿ ಅಡಿ ಅವುಗಳ ಮೇಲಿನ ತೆರಿಗೆಯನ್ನು ಆ ಮಟ್ಟಕ್ಕೆ ಸೀಮಿತಗೊಳಿಸಿದರೆ ಕೇಂದ್ರ ಮತ್ತು ರಾಜ್ಯಗಳು ಭಾರೀ ಆದಾಯ ನಷ್ಟವನ್ನು ಅನುಭವಿಸಬೇಕಾಗುತ್ತದೆ. ರಾಜ್ಯಗಳು ಅನುಭವಿಸುವ ನಷ್ಟಕ್ಕೆ ಪರಿಹಾರ ನೀಡಲು ಕೇಂದ್ರದ ಬಳಿ ಹಣವಿಲ್ಲ. ಹೀಗಾಗಿ ಒಟ್ಟು ತೆರಿಗೆಯು ಈಗಿನ ಮಟ್ಟವನ್ನು ಮೀರದಂತೆ ಗರಿಷ್ಠ ಜಿಎಸ್‌ಟಿಯ ಜೊತೆಗೆ ರಾಜ್ಯಗಳೂ ಕೆಲವು ಪ್ರಮಾಣದಲ್ಲಿ ವ್ಯಾಟ್ ವಿಧಿಸಲು ಅವಕಾಶ ನೀಡುವುದೊಂದೇ ಪರಿಹಾರವಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News