ಸೇನಾ ಕಾರ್ಯಾಚರಣೆಗೆ ಉಗ್ರರಿಗಿಂತ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ: ಆಝಾದ್

Update: 2018-06-21 03:58 GMT

ಹೊಸದಿಲ್ಲಿ, ಜೂ. 21: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಸೇನಾ ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳಿಗಿಂತ ಹೆಚ್ಚು ಮಂದಿ ಅಮಾಯಕ ನಾಗರಿಕರು ಜೀವ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಝಾದ್ ಹೇಳಿದ್ದಾರೆ.

ಆಝಾದ್ ಹೇಳಿಕೆಗೆ ಬಿಜೆಪಿ ಉಗ್ರವಾಗಿ ಪ್ರತಿಕ್ರಿಯಿಸಿದ್ದು, ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಕೆಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಪ್ರತಿದಾಳಿ ನಡೆಸಿದೆ.

ಕಾಶ್ಮೀರದಲ್ಲಿ ಆಲ್ ಔಟ್ ಕಾರ್ಯಾಚರಣೆ ನಡೆಸುವುದಾಗಿ ಬಿಜೆಪಿ ಹೇಳಿರುವುದು, ಜಮ್ಮು ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆಸಲು ಆ ಪಕ್ಷ ಯೋಚಿಸಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಟಿವಿ ಸಂದರ್ಶನವೊಂದರಲ್ಲಿ ಆಝಾದ್ ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ. ದೇಶದ ಗಡಿಯಲ್ಲಿ ನಾಗರಿಕರ ರಕ್ಷಣೆಗೆ ಪ್ರಾಣ ತ್ಯಾಗ ಮಾಡುತ್ತಿರುವ ಸೇನಾ ಸಿಬ್ಬಂದಿಯ ವಿರುದ್ಧ ಆಝಾದ್ ನೀಡಿರುವ ಹೇಳಿಕೆ ಖಂಡನೀಯ ಎಂದು ಬಿಜೆಪಿ ಟೀಕಿಸಿದೆ.

"ಸೇನೆ ನಾಲ್ವರು ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡು 20 ನಾಗರಿಕರನ್ನು ಹತ್ಯೆ ಮಾಡಿದೆ. ಸೇನೆಯ ಕಾರ್ಯಾಚರಣೆ ಉಗ್ರರ ವಿರುದ್ಧ ನಡೆಯುವ ಬದಲು ನಾಗರಿಕರ ವಿರುದ್ಧ ನಡೆಯುತ್ತಿದೆ. ಪುಲ್ವಾನಾದಲ್ಲಿ 13 ನಾಗರಿಕರನ್ನು ಕೊಂದ ಸೇನೆ ಒಬ್ಬ ಉಗ್ರನನ್ನಷ್ಟೇ ಹತ್ಯೆ ಮಾಡಿದೆ ಎಂದು ಸಂದರ್ಶನದಲ್ಲಿ ಆಝಾದ್ ವಿವರಿಸಿದ್ದರು.

"ಸೇನೆಯ ವಿರುದ್ಧ ಆಧಾರರಹಿತ ಹೇಳಿಕೆ ನೀಡುವ ಆಝಾದ್ ಅವರಂಥ ನಾಯಕರ ವಿರುದ್ಧ ರಾಹುಲ್‌ಗಾಂಧಿ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಬೇಕಿದ್ದರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಿ. ಆದರೆ ಸೇನೆಯ ವಿರುದ್ಧ ಇಂಥ ಲಘು ಹೇಳಿಕೆಗಳನ್ನು ನೀಡಬಾರದು" ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನಿಲ್ ಬಲೂನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News