ಮಿತ್ರಪಕ್ಷದ ಶಾಸಕನನ್ನು 'ಕಳ್ಳ' ಎಂದ ಬಿಜೆಪಿ ನಾಯಕ !

Update: 2018-06-21 07:35 GMT

ಲಕ್ನೋ, ಜೂ. 21: ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ರಾಜ್ಯದ ಆದಿತ್ಯನಾಥ್ ಸರಕಾರದ ಮಿತ್ರ ಪಕ್ಷವಾಗಿರುವ ಸುಹೇಲ್ ದೇವ್ ಭಾರತೀಯ ಸಮಾಜ್ ಪಕ್ಷದ ನಾಯಕ ಕೈಲಾಶ್ ಸೋಂಕರ್ ಅವರನ್ನು ಸಾರ್ವಜನಿಕವಾಗಿ `ಚೋರ್' ಎಂದು ಹೇಳಿರುವುದು ಭಾರೀ ವಿವಾದಕ್ಕೀಡಾಗಿದೆ. ಈ ನಿಂದನೆಯಿಂದ ಆಕ್ರೋಶಗೊಂಡಿರುವ ಕೈಲಾಶ್ ಇದೀಗ ಪಾಂಡೆಯನ್ನು ಕೋರ್ಟಿಗೆಳೆಯುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಮಂಗಳವಾರ ವಾರಣಾಸಿ ಸಮೀಪವಿರುವ ಕೈಲಾಶ್ ಅವರ ಅಜ್ಘರಾ ಕ್ಷೇತ್ರದಲ್ಲಿ ಕೇಂದ್ರ ಸರಕಾರಿ ಯೋಜನೆಗಳ ಶಂಕುಸ್ಥಾಪನೆ ಸಂದರ್ಭ ಮಾತನಾಡಿದ ಪಾಂಡೆ ''ಶಾಸಕ ಕಳ್ಳ''ನಾಗಿ ಮಾರ್ಪಟಿದ್ದರಿಂದ ಅವರ ಹೆಸರನ್ನು ಶಂಕುಸ್ಥಾಪನಾ ಫಲಕದಲ್ಲಿ ಹಾಕುವಂತಿಲ್ಲ'' ಎಂದು ಹೇಳಿದ್ದರು.

''ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಅವರು (ಕೈಲಾಶ್ ಸೋಂಕರ್) ಬಡವರನ್ನು ಲೂಟುತ್ತಿದ್ದಾರೆಂದು ನನಗೆ ಹೇಳಲಾಗಿದೆ.  ಜನರು ಅವರ ವಿರುದ್ಧ ದೂರುತ್ತಿದ್ದಾರೆ. ಜನಪ್ರತಿನಿಧಿಗಳಿಂದ ಯಾವುದೇ ಭ್ರಷ್ಟಾಚಾರವನ್ನು ನಾವು ಸಹಿಸುವುದಿಲ್ಲ'' ಎಂದು ಪಾಂಡೆ ಹೇಳಿದ್ದರು.

ಸಮಾರಂಭದಲ್ಲಿ ಭಾಗವಹಿಸದೇ ಇದ್ದ ಕೈಲಾಶ್, ತಮ್ಮ ವಿರುದ್ಧ ಪಾಂಡೆ ಇಂತಹ ಪದಗಳನ್ನು ಏಕೆ ಉಪಯೋಗಿಸಿದರೆಂದು ತಮಗೆ ತಿಳಿದಿಲ್ಲ, ನಾನು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ ಹಾಗೂ ಈ ರೀತಿ  ನನ್ನ ಹೆಸರು ಕೆಡದಂತೆ ನೋಡಿಕೊಳ್ಳುತ್ತೇನೆ'' ಎಂದರು.

ಕಳೆದ ಕೆಲ ತಿಂಗಳುಗಳಿಂದ ಬಿಜೆಪಿ ಹಾಗೂ ಸುಹೇಲ್ ದೇವ್ ಭಾರತೀಯ ಸಮಾಜ್ ಪಕ್ಷದ  ನಡುವಿನ ಸಂಬಂಧದಲ್ಲಿ ಬಿರುಕುಗಳು ಏರ್ಪಟ್ಟಿರುವುದು ಸ್ಪಷ್ಟವಾಗಿದೆ. ಈ ಪಕ್ಷ ರಾಜ್ಯ ವಿಧಾನಸಭೆಯಲ್ಲಿ ಒಟ್ಟು ನಾಲ್ಕು ಸ್ಥಾನಗಳನ್ನು ಹೊಂದಿದೆಯಲ್ಲದೆ ಪೂರ್ವ ಉತ್ತರ ಪ್ರದೇಶದಲ್ಲೂ ಸಾಕಷ್ಟು ಜನಬೆಂಬಲ ಹೊಂದಿದೆ.

ಸುಹೇಲ್ ದೇವ್ ಬಹುಜನ ಸಮಾಜ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ  ಹಾಗೂ ಸಚಿವ ಓಂ ಪ್ರಕಾಶ್ ರಾಜಭರ್ ಈ ವರ್ಷ ಮಾರ್ಚ್ ತಿಂಗಳಲ್ಲಿ ರಾಜ್ಯಸಭಾ ಚುನಾವಣೆಗೆ ಮುಂಚಿತವಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಟೀಕಿಸುತ್ತಾ ಅವರು ಆಡಳಿತಕ್ಕೆ ಸಂಬಂಧಿಸಿದಂತೆ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದ್ದರು. ಅವರನ್ನು ಸಮಾಧಾನಿಸಲು ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News