ಅಂತರ್ ಧರ್ಮೀಯ ದಂಪತಿಗೆ ಅವಮಾನಿಸಿದ ಪಾಸ್ ಪೋರ್ಟ್ ಅಧಿಕಾರಿಯ ವರ್ಗಾವಣೆ

Update: 2018-06-21 10:14 GMT
ಪಾಸ್ ಪೋರ್ಟ್ ಜೊತೆ ಮುಹಮ್ಮದ್ ಅನಸ್ ಸಿದ್ದೀಖಿ, ತನ್ವಿ ಸೇಠ್

ಲಕ್ನೋ, ಜೂ.21:  ನಗರದ ಪಾಸ್ ಪೋರ್ಟ್ ಕಚೇರಿಯಲ್ಲಿ ತಮಗೆ ಧರ್ಮದ ಹೆಸರಿನಲ್ಲಿ ಅವಮಾನಿಸಲಾಯಿತೆಂದು  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಅಂತರ್-ಧರ್ಮೀಯ ದಂಪತಿ ದೂರಿದ ಮರುದಿನವೇ ದಂಪತಿಗೆ ಪಾಸ್ ಪೋರ್ಟ್ ದೊರೆಯುವಂತೆ ಸಚಿವೆ ನೋಡಿಕೊಂಡಿದ್ದಾರೆ. ಆರೋಪಿ ಅಧಿಕಾರಿ ವಿಕಾಸ್ ಮಿಶ್ರಾ ನನ್ನು ಈಗ ವರ್ಗಾಯಿಸಲಾಗಿದೆ ಹಾಗೂ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.

ಸುಷ್ಮಾ ಸ್ವರಾಜ್ ಗೆ ದಂಪತಿ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಎಂ.ಎಂ. ಮುಳೆ ಪ್ರಕರಣವನ್ನು ಕೈಗೆತ್ತಿಕೊಂಡು ಸೂಕ್ತ ಕ್ರಮದ ಭರವಸೆ ನೀಡಿದ್ದರಲ್ಲದೆ, ದಂಪತಿಯನ್ನು ಪಾಸ್ ಪೋರ್ಟ್ ಕಚೇರಿಗೆ ಬರ ಹೇಳಿ ಅವರ ಪಾಸ್ ಪೋರ್ಟ್ ಗಳನ್ನು ಹಸ್ತಾಂತರಿಸಲಾಗಿತ್ತು.

ಬುಧವಾರ ಲಕ್ನೋದ ಪಾಸ್ ಪೋರ್ಟ್ ಕಚೇರಿಗೆ ತೆರಳಿದ್ದ ದಂಪತಿಯನ್ನು ಅವಮಾನಿಸಿದ್ದ ಪಾಸ್ ಪೋರ್ಟ್ ಅಧಿಕಾರಿ ಮಿಶ್ರಾ ದಂಪತಿಯ ಅರ್ಜಿಯನ್ನು ತಿರಸ್ಕರಿಸಿದ್ದರು. ಸಂತ್ರಸ್ತ ಮುಹಮ್ಮದ್ ಅನಸ್ ಸಿದ್ದೀಖಿ ಅವರು ತನ್ವಿ ಸೇಠ್ ಅವರನ್ನು 2007ರಲ್ಲಿ ವಿವಾಹವಾಗಿದ್ದು, ಅವರಿಗೆ ಆರು ವರ್ಷದ ಮಗಳಿದ್ದಾಳೆ. ಜೂನ್ 19ಕ್ಕೆ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಅವರು ಜೂನ್ 20ರಂದು ಕಚೇರಿಗೆ ಆಗಮಿಸಿದ್ದರು. ಕೌಂಟರ್  ಎ ಹಾಗೂ ಬಿ ಯಲ್ಲಿ ದಂಪತಿಗೆ ಯಾವುದೇ ಸಮಸ್ಯೆಯಾಗಿರದೇ ಇದ್ದರೂ ಕೌಂಟರ್ ಸಿ ಯಲ್ಲಿ ಅವರು ಮಿಶ್ರಾ  ಜತೆ ವ್ಯವಹರಿಸಬೇಕಿತ್ತು, ತನ್ವಿ ಅರ್ಜಿ ಮೇಲೆ ಕಣ್ಣಾಡಿಸಿದ ಅಧಿಕಾರಿ ಆಕೆಯ ಪತಿಯ ಹೆಸರನ್ನು ಓದಿ ಆಕೆಯ ಮೇಲೆ ಹರಿಹಾಯ್ದಿದ್ದರಲ್ಲದೆ ಆಕೆ  ಆತನನ್ನು ವಿವಾಹವಾಗಬಾರದಾಗಿತ್ತು ಎಂದಿದ್ದರು. ಬದಲಾದ ಹೆಸರಿನೊಂದಿಗೆ ಎಲ್ಲಾ ದಾಖಲೆಗಳನ್ನು ತಿದ್ದಬೇಕು ಎಂದೂ ಆಕೆಗೆ ಹೇಳಲಾಗಿತ್ತು. ಇದರ ಬಗ್ಗೆ ಸೇಠಿ ನಂತರ ಸುಷ್ಮಾ ಸ್ವರಾಜ್ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News