ಡಾ.ಜಿ.ಪರಮೇಶ್ವರ್‌ರಿಂದ ಬಹುಮಹಡಿ ವಾಹನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆ

Update: 2018-06-21 13:30 GMT

ಬೆಂಗಳೂರು, ಜೂ.21: ನಗರದ ಸ್ವಾತಂತ್ರ ಉದ್ಯಾನವನ ಬಹುಮಹಡಿ ವಾಹನ ನಿಲ್ದಾಣ ಕಾಮಗಾರಿ ಹಾಗೂ ಮಹಾರಾಜ ಕಾರು ನಿಲ್ದಾಣ ಕಾಮಗಾರಿಗಳು ಮುಂದಿನ ಮಾರ್ಚ್‌ವೊಳಗೆ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಗುರುವಾರ ನಗರದ ವಿವಿಧ ಭಾಗಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ವಾಹನ ನಿಲ್ದಾಣ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಸ್ವಾತಂತ್ರ ಉದ್ಯಾನವನದಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ನಿಲ್ದಾಣವನ್ನು 500 ಕಾರು ಹಾಗೂ 500 ಬೈಕ್ ನಿಲುಗಡೆಗೆ ಸಾಧ್ಯವಾಗುವ ರೀತಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಮಗಾರಿ ಪ್ರಾರಂಭಗೊಂಡ 24 ತಿಂಗಳಲ್ಲಿ ಮುಗಿಯಬೇಕಿತ್ತು. ಕಾಮಗಾರಿ ವೇಳೆ ಕಲ್ಲು ಸಿಕ್ಕಿರುವ ಕಾರಣ ನಿಧಾನವಾಗಿದೆ. ಮಾರ್ಚ್ ಕೊನೆಯ ವಾರದೊಳಗೆ ಕೆಲಸ ಮುಗಿಸುವಂತೆ ಅಧಿಕಾರಿಗಳು ಬರವಣಿಗೆ ಮೂಲಕ ಭರವಸೆ ನೀಡಿರುವುದರಿಂದ ತಡವಾಗುವ ಪ್ರಶ್ನೆ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರಾದ್ಯಂತ ವಾಹನಗಳ ನಿಲ್ದಾಣ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. ಕಾಮಗಾರಿ ವೇಳೆ ಎದುರಾಗುವ ಅಡೆತಡೆಗಳನ್ನು ಶೀಘ್ರವೆ ಪರಿಹರಿಸಿಕೊಂಡು ಅವಧಿಗೆ ಮುನ್ನ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News