ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಪರ ನಿಂತ ಸನಾತನ ಸಂಸ್ಥೆ

Update: 2018-06-22 05:12 GMT

ಬೆಂಗಳೂರು, ಜೂ.22: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಬಂಧಿತ ಆರೋಪಿಗಳಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆಯುವ ಸಲುವಾಗಿ ಚಿತ್ರಹಿಂಸೆ ನೀಡುತ್ತಿದೆ ಎಂದು ಸನಾತನ ಸಂಸ್ಥೆ ಆಪಾದಿಸಿದೆ.

ಬಂಧಿತರ ಪೈಕಿ ಕೆಲವರು ಸನಾತನ ಸಂಸ್ಥೆ ಜತೆ ನಂಟು ಹೊಂದಿರುವ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಗೋವಾ ಮೂಲದ ಹಿಂದುತ್ವ ಪರ ಸಂಘಟನೆಗಳ ಮೇಲೆ ಕಣ್ಣಿಟ್ಟಿದ್ದು, ಸನಾತನ ಸಂಸ್ಥೆಯ ಹೊಸ ಆರೋಪ ಸಂಸ್ಥೆಯ ನಂಟನ್ನು ಖಚಿತಪಡಿಸಿದೆ.

ಸನಾತನ ಸಂಸ್ಥೆಯ ವಕ್ತಾರ ಚೇತನ್ ರಾಜಹಂಸ ಗುರುವಾರ ಹೇಳಿಕೆ ನೀಡಿ, ಈ ಬಂಧನ ಕಾನೂನುಬಾಹಿರ. "ಕೇಸರಿ ಭಯೋತ್ಪಾದನೆ" ಬಿಂಬಿಸುವ ಸಲುವಾಗಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡಿದ ಹುನ್ನಾರ ಇದು ಎಂದು ಆಪಾದಿಸಿದ್ದಾರೆ.

ಮಾಧ್ಯಮಗಳಿಗೆ ಸನಾತನ ಸಂಸ್ಥೆ ಮತ್ತು ಸಂಘ ಪರಿವಾರದ ಸಂಘಟನೆಗಳ ಬಗ್ಗೆ ಕಾಲ್ಪನಿಕ ವರದಿಗಳನ್ನು ನೀಡಲಾಗುತ್ತಿದೆ ಎಂದೂ ಅವರು ಹೇಳಿದರು. ಒಬ್ಬ ಆರೋಪಿ ಸುಜಿತ್ ಕುಮಾರ್‌ನನ್ನು ಮೇ 6ರಂದು ಪೊಲೀಸರು ಕರೆದೊಯ್ದಿದ್ದರು. ಆದರೆ ಮೇ 20ರಂದು ಆತನನ್ನು ಬಂಧಿಸಲಾಗಿದೆ ಎಂದು ತೋರಿಸಲಾಗಿದೆ. ಇತರ ಮೂವರನ್ನು ಮೇ 14ರಂದು ವಶಕ್ಕೆ ಪಡೆದು 21ರಂದು ಬಂಧನ ಅಧಿಕೃತಗೊಳಿಸಲಾಗಿದೆ. ಆರೋಪಿಗಳನ್ನು ಹಲವು ದಿನಗಳ ಕಾಲ ಅಕ್ರಮ ಬಂಧನದಲ್ಲಿ ಇಡಲಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆರೋಪಿಗಳಿಗೆ ಹೊಡೆದು ಚಿತ್ರಹಿಂಸೆ ನೀಡಲಾಗಿದ್ದು, ಅವರು ಹಿಂದೂಗಳು ಎಂಬ ಕಾರಣಕ್ಕೆ ಕಾನೂನು ನೆರವು ಕೂಡಾ ನೀಡುತ್ತಿಲ್ಲ ಎಂದು ಚೇತನ್ ರಾಜಹಂಸ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News