ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟು ಮೆಸ್ಸಿ ಅಭಿಮಾನಿ ಕೊಟ್ಟಾಯಂನ ಯುವಕ ನಾಪತ್ತೆ

Update: 2018-06-23 04:04 GMT

ಕೊಟ್ಟಾಯಂ, ಜೂ.23: ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿಯ ಕಟ್ಟಾ ಅಭಿಮಾನಿಯೊಬ್ಬ, ಫಿಫಾ ವಿಶ್ವಕಪ್ ಫುಟ್ಬಾಲ್ 2018ರಲ್ಲಿ ಕ್ರೊವೇಷಿಯಾ ತಂಡದ ವಿರುದ್ಧ ಅರ್ಜೆಂಟೀನಾ ಸೋತ ಹಿನ್ನೆಲೆಯಲ್ಲಿ ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟು ನಾಪತ್ತೆಯಾಗಿದ್ದಾನೆ.

ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಮತ್ತು ಕ್ರೊವೇಷಿಯಾ ನಡುವಿನ ಪಂದ್ಯವನ್ನು ಟಿವಿಯಲ್ಲಿ ನೋಡುತ್ತಿದ್ದ ದಿನು ಅಲೆಕ್ಸ್(30) ಆ ಬಳಿಕ ನಾಪತ್ತೆಯಾಗಿದ್ದಾನೆ. ಈ ಪಂದ್ಯದಲ್ಲಿ ಅರ್ಜೆಂಟೀನಾ 0-3 ಅಂತರದ ಆಘಾತಕಾರಿ ಸೋಲು ಕಂಡಿತ್ತು.

ಮೀನಚಿಲ್ ನದಿ ದಂಡೆಯ ಅರಮನೂರು ನಿವಾಸದಿಂದ ಈ ಮೆಸ್ಸಿ ಅಭಿಮಾನಿ ನಾಪತ್ತೆಯಾಗಿದ್ದು, ಅಗ್ನಿಶಾಮಕ ದಳ, ಈಜುತಜ್ಞರು ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ದಿನು ತಂದೆ ಪಿ.ವಿ.ಅಲೆಗ್ಸಾಂಡರ್ ಬೆಳಗ್ಗೆ ಎದ್ದು ನೋಡಿದಾಗ ಮಗ ನಾಪತ್ತೆಯಾಗಿದ್ದ. ದಿನು ಮಲಗುವ ಕೊಠಡಿಯಲ್ಲಿ ಕೈಬರಹದ ಒಂದು ಟಿಪ್ಪಣಿ ಪತ್ತೆಯಾಗಿದ್ದು, ದಿನು ಬಹುಶಃ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

"ನಾನು ಈ ವಿಶ್ವದಲ್ಲಿ ನೋಡುವುದು ಇನ್ನೇನೂ ಉಳಿದಿಲ್ಲ. ನಾನು ಹೋಗುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ" ಎಂದು ಮಲಯಾಳಂನಲ್ಲಿ ಟಿಪ್ಪಣಿ ಬರೆದಿಡಲಾಗಿದೆ.

ಯುವಕನ ಸಂಬಂಧಿ ಜೋಸಿ ಜೋಸೆಫ್ ಕೊಟ್ಟತ್ತಿಲ್ ಹೇಳುವಂತೆ, ಅಂತರ್ಮುಖಿಯಾಗಿದ್ದ ದಿನುಗೆ ಕೆಲವೇ ಮಂದಿ ಗೆಳೆಯರಿದ್ದರು. ಆದರೆ ಎಲ್ಲ ಪ್ರಮುಖ ಲೀಗ್ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದ ಈತ ಮೆಸ್ಸಿಯ ಕಟ್ಟಾ ಅಭಿಮಾನಿ.

ಮತ್ತೊಂದು ಪುಸ್ತಕದಲ್ಲಿ "ಮೆಸ್ಸಿ, ನನ್ನ ಜೀವ. ನೀನು ವಿಶ್ವಕಪ್ ಎತ್ತುವುದನ್ನು ನೋಡಲು ಕಾಯುತ್ತಿದೆ" ಎಂದು ಬರೆದಿದ್ದ. ಮತ್ತೊಂದು ಪುಸ್ತಕದಲ್ಲಿ, "ನನ್ನ ತಂಡ ನನ್ನ ಜೀವ ಹಿಡಿದುಕೊಂಡು ಪಯಣ ಆರಂಭಿಸಿದೆ. ನಾನು ಸಾಧಿಸುತ್ತೇನೆ" ಎಂದು ಬರೆದಿತ್ತು. ದಿನು ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News