​ಮುಂಗಾರು ಬಿತ್ತನೆ ಆರಂಭವಾದರೂ ಘೋಷಣೆಯಾಗದ ಬೆಂಬಲ ಬೆಲೆ: ರೈತರಲ್ಲಿ ಆತಂಕ

Update: 2018-06-23 04:10 GMT

ಹೊಸದಿಲ್ಲಿ, ಜೂ.23: ಮುಂಗಾರು ಹಂಗಾಮಿನಲ್ಲಿ ಬೆಳೆಯುವ 23 ಬೆಳೆಗಳಿಗೆ ರಾಜ್ಯವಾರು ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಇನ್ನೂ ಘೋಷಿಸದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಹಲವು ರಾಜ್ಯಗಳಲ್ಲಿ ಮುಂಗಾರು ಬಿತ್ತನೆ ಆರಂಭವಾಗಿದ್ದರೂ ಕೇಂದ್ರ ಇನ್ನೂ ಕನಿಷ್ಠ ಬೆಂಬಲ ಬೆಲೆ ಘೋಷಿಸಿಲ್ಲ. ಸರ್ಕಾರ ಘೋಷಿಸುವ ಬೆಂಬಲ ಬೆಲೆ, ಆ ಹಂಗಾಮಿನ ಬೆಲೆಯ ಸಂಕೇತವನ್ನು ರೈತರಿಗೆ ನೀಡುವುದರಿಂದ ಯಾವ ಬೆಳೆ ಬಿತ್ತನೆ ಮಾಡಬೇಕು ಎಂದು ರೈತರು ನಿರ್ಧರಿಸಲು ಕೂಡಾ ಇದು ಆಧಾರವಾಗುತ್ತದೆ.

ಸಾಮಾನ್ಯವಾಗಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಜೂನ್ ಎರಡನೇ ವಾರದಲ್ಲಿ ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗುತ್ತದೆ. ಈ ಬಾರಿ ಉತ್ಪಾದನಾ ವೆಚ್ಚದ 1.5 ಪಟ್ಟನ್ನು ಬೆಂಬಲ ಬೆಲೆಯಾಗಿ ಘೋಷಿಸುವುದಾಗಿ ಸರ್ಕಾರ ಪ್ರಕಟಿಸಿತ್ತು. ಆದರೆ ಇದುವರೆಗೆ ಈ ಪ್ರಸ್ತಾವ ಕೇಂದ್ರ ಸಚಿವ ಸಂಪುಟದ ಮುಂದೆ ಬಂದಿಲ್ಲ.

"ಇದು ವಿಳಂಬ ಎಂದು ನಾನು ಹೇಳುವುದಿಲ್ಲ. ಹಿಂದೆ ಕೂಡಾ ಮುಂಗಾರು ಹಂಗಾಮಿನ ಬೆಂಬಲ ಬೆಲೆಯನ್ನು ಜೂನ್ ಕೊನೆಗೆ ಘೋಷಿಸಿದ ನಿರ್ದಶನಗಳಿವೆ" ಎಂದು ಕೃಷಿ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂದಿನ ವಾರದ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2017-18ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಕನಿಷ್ಠ ಬೆಂಬಲ ಬೆಲೆಯನ್ನು ಜೂನ್ 7ರಂದು ಘೋಷಿಸಲಾಗಿತ್ತು. ಅದಕ್ಕೂ ಹಿಂದಿನ ವರ್ಷ ಜೂನ್ 1ರಂದು, 2014-15ರಲ್ಲಿ ಜೂನ್ 25ರಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News