ಶಾಲೆ ಬಳಿಯ ಮದ್ಯದಂಗಡಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ LKG ವಿದ್ಯಾರ್ಥಿ!

Update: 2024-05-08 15:01 GMT

ಅಲಹಾಬಾದ್‌ ಹೈಕೋರ್ಟ್ (PTI)

ಲಕ್ನೊ: ತಾನು ವ್ಯಾಸಂಗ ಮಾಡುತ್ತಿರುವ ಶಾಲೆ ಹಾಗೂ ಮದ್ಯದಂಗಡಿಯ ನಡುವೆ ಕೇವಲ 30 ಮೀಟರ್ ಅಂತರವಿದೆ ಎಂದು ಐದು ವರ್ಷದ ಎಲ್ ಕೆ ಜಿ ವಿದ್ಯಾರ್ಥಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಕಾನ್ಪುರದಲ್ಲಿನ ಶಾಲೆಗೆ ಹೊಂದಿಕೊಂಡಂತಿರುವ ಮದ್ಯದಂಗಡಿಯ ಪರವಾನಗಿ ನವೀಕರಿಸಬಾರದು ಎಂದು ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿದೆ.

ಅರ್ಜಿದಾರರ ಪರ ವಕೀಲರ ಪ್ರಕಾರ, ದೇಶದಲ್ಲಿಯೇ ಅತ್ಯಂತ ಕಿರಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರನಾದ ಅಥರ್ವ ದೀಕ್ಷಿತ್, ದೇಶೀಯ ಮದ್ಯದಂಗಡಿಯ ಸ್ಥಳವನ್ನು ಬದಲಿಸಬೇಕು ಹಾಗೂ 2024-25ನೇ ಸಾಲಿನ ಪರವಾನಗಿ ನವೀಕರಣ ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದನು ಎಂದು ತಿಳಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅರುಣ್ ಭನ್ಸಾಲಿ ಹಾಗೂ ನ್ಯಾ. ವಿಕಾಸ್ ಬುಧ್ವರ್ ನೇತೃತ್ವದ ವಿಭಾಗೀಯ ನ್ಯಾಯಪೀಠವು, “ಸಾಂದರ್ಭಿಕವಾಗಿ ಅರ್ಜಿದಾರರ ರಿಟ್ ಅರ್ಜಿಯನ್ನು ಭಾಗಶಃ ಅನುಮತಿಸಲಾಗಿದೆ. ಪ್ರಶ್ನೆಗೊಳಗಾಗಿರುವ ಮದ್ಯದಂಗಡಿಯ ಹಾಲಿ ಪರವಾನಗಿಯು ಮಾರ್ಚ್ 31, 2025ರಂದು ಅಂತ್ಯಗೊಂಡ ನಂತರ, ಅರ್ಥಾತ್, 2025-26ನೇ ಆರ್ಥಿಕ ವರ್ಷದ ನಂತರ ಪ್ರತಿವಾದಿಗಳು ಪರವಾನಗಿ ಮಂಜೂರು ಮಾಡುವುದರಿಂದ/ನವೀಕರಿಸುವುದರಿಂದ ದೂರ ಉಳಿಯಬೇಕು” ಎಂದು ಮೇ 2ರ ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ.

ಸಮಾಜ ಘಾತುಕ ಶಕ್ತಿಗಳು ಕಲೆಯುವ ತಾಣವಾಗಿ ಕುಖ್ಯಾತವಾಗಿರುವ ಮದ್ಯದಂಗಡಿಯು ದಿನಪೂರ್ತಿ ತೆರೆದಿರುತ್ತದೆ ಎಂದು ಅಪ್ರಾಪ್ತ ಅರ್ಜಿದಾರನು ತನ್ನ ತಂದೆಯ ಮೂಲಕ ಅರ್ಜಿ ಸಲ್ಲಿಸಿದ್ದ. ಇದರೊಂದಿಗೆ ಐಜಿಆರ್ಎರಸ್ ಪೋರ್ಟಲ್ (ಸಾರ್ವಜನಿಕ ಕುಂದುಕೊರತೆಗಳ ದಾಖಲಾತಿಗಾಗಿನ ಉತ್ತರ ಪ್ರದೇಶದ ಆನ್ ಲೈನ್ ಪೋರ್ಟಲ್) ಕಳೆದ ವರ್ಷದ ಜುಲೈ 20ರಂದು ನೀಡಿದ್ದ ವರದಿಯನ್ನು ಆಧರಿಸಿ ಅರ್ಜಿದಾರನ ತಂದೆಯು ದೂರೊಂದನ್ನೂ ದಾಖಲಿಸಿದ್ದರು. ಈ ವರದಿಯು ಅರ್ಜಿದಾರನ ಶಾಲೆಯಿಂದ ಮದ್ಯದಂಗಡಿಯು 20-30 ಮೀಟರ್ ಅಂತರದಲ್ಲಿದೆ ಎಂದು ದೃಢಪಡಿಸಿತ್ತಾದರೂ, ಅರ್ಜಿದಾರನ ಶಾಲೆಗಿಂತ ಮದ್ಯದಂಗಡಿಯು ಹಳತಾಗಿದ್ದುದರಿಂದ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News