ನೆಲಮಂಗಲ: ಬ್ಯಾರಿಕೇಡ್‌ಗೆ ಕಾರು ಢಿಕ್ಕಿ; ಇಬ್ಬರು ಯುವಕರು ಮೃತ್ಯು

Update: 2018-06-23 05:03 GMT

ಬೆಂಗಳೂರು, ಜೂ.23: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರ ಹೊರವಲಯದ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಕಾರಿನ ಚಾಲಕ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೊಂದಮಲೇನಹಳ್ಳಿಯ ನಿವಾಸಿಗಳಾದ ಶ್ರೀಧರ್(24) ಮತ್ತು ಪುನೀತ್(22) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸುಮನ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೂವರು ಸಂಚರಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 75ರ ಯಂಟಗಾನಹಳ್ಳಿಯ ಬಳಿ ತಲುಪಿದಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಢಿಕ್ಕಿ ಹೊಡೆದ ರಭಸಕ್ಕೆ ಬ್ಯಾರಿಕೇಡ್ ಮುರಿದಿದ್ದು, ಕಾರು ಸರ್ವೀಸ್ ರಸ್ತೆಯಿಂದ ಹೊರಕ್ಕೆ ಎಸೆಯಲ್ಪಟ್ಟಿದೆ. ಇದರಿಂದ ತಲೆಗೆ ಗಂಭೀರ ಗಾಯಗಳಾಗಿದ್ದ ಶ್ರೀಧರ್ ಮತ್ತು ಪುನೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಸುಮನ್‌ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ನೆಲಮಂಗಲ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News