'ಐತಿಹಾಸಿಕ ಪತ್ರಿಕಾಗೋಷ್ಠಿ'ಯ ಬಗ್ಗೆ ಯಾವುದೇ ವಿಷಾದವಿಲ್ಲ: ನಿವೃತ್ತ ಜಸ್ಟಿಸ್ ಚೆಲಮೇಶ್ವರ್

Update: 2018-06-23 07:36 GMT

ಹೊಸದಿಲ್ಲಿ, ಜೂ.23: ಜನವರಿಯಲ್ಲಿ ತಾನು ಹಾಗೂ ಇತರ ಮೂವರು ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳು ಮುಖ್ಯ ನ್ಯಾಯಮೂರ್ತಿಯ ಕಾರ್ಯಶೈಲಿಯನ್ನು ಪ್ರತಿಭಟಿಸಿ ನಡೆಸಿದ ಅಭೂತಪೂರ್ವ ಪತ್ರಿಕಾಗೋಷ್ಠಿಯ ಬಗ್ಗೆ ತಮಗೆ ವಿಷಾದವೇನೂ ಇಲ್ಲ ಎಂದು ಶುಕ್ರವಾರ ನಿವೃತ್ತರಾದ ಜಸ್ಟಿಸ್ ಜಸ್ತಿ ಚೆಲಮೇಶ್ವರ್ ಹೇಳಿದ್ದಾರೆ. ಕೆಲವೊಂದು ವಿಚಾರಗಳನ್ನು ಸರಿಪಡಿಸಲು ನ್ಯಾಯಾಧೀಶರು ಯತ್ನಿಸಿದ್ದರೂ ಅದು ಫಲ ನೀಡದೇ ಇದ್ದಾಗ ಅದನ್ನು ದೇಶಕ್ಕೆ ತಿಳಿಸಲು ನಿರ್ಧರಿಸಿದೆವು ಎಂದು ಅವರು ಹೇಳಿಕೊಂಡರು.

ಸದ್ಯ ಯಾವುದೂ ಬದಲಾಗಿಲ್ಲ ಎಂದು ಹೇಳುವ ಪ್ರಯತ್ನವನ್ನು ನಡೆಸಿದ ಜಸ್ಟಿಸ್ ಚೆಲಮೇಶ್ವರ್, ಅದೇ ಸಮಯ ಆ ಪತ್ರಿಕಾಗೋಷ್ಠಿ ನ್ಯಾಯಾಲಯಗಳಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಜಾಗೃತಿ ಮೂಡಿಸಿತ್ತಲ್ಲದೆ ಸುಪ್ರೀಂ ಕೋರ್ಟನನ್ನು ರಕ್ಷಿಸುವ ಅಗತ್ಯವನ್ನೂ ಮನಗಾಣಿಸಿದೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನ್ಯಾಯಾಧೀಶರನ್ನು ಆಯ್ಕೆ ಮಾಡುವ ಈಗಿನ ಕೊಲೀಜಿಯಂ ವ್ಯವಸ್ಥೆಯ ಬದಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಬೇಕೆಂಬ ಸರಕಾರದ ನಿಲುವನ್ನು ಸಮರ್ಥಿಸಿದ್ದ ಏಕೈಕ ನ್ಯಾಯಾಧೀಶ ಚೆಲಮೇಶ್ವರ್ ಆಗಿದ್ದರಾದರೂ ಈ ಆಯೋಗ ರಚನೆಯನ್ನು ಉನ್ನತ ನ್ಯಾಯಾಲಯ 2015ರಲ್ಲಿ ತಿರಸ್ಕರಿಸಿತ್ತು.

ನ್ಯಾಯಧೀಶರ ನೇಮಕಾತಿಯ ಈಗಿನ ಪ್ರಕ್ರಿಯೆ ನ್ಯಾಯೋಚಿತ ಹಾಗೂ ಪಾರದರ್ಶಕವಾಗಿಲ್ಲ ಎಂದು ಒಪ್ಪಿಕೊಳ್ಳುವ ಅವರು; ಮುಖ್ಯ ನ್ಯಾಯಮೂರ್ತಿ ಹುದ್ದೆ ಸೇರಿದಂತೆ ಈ ದೇಶದಲ್ಲಿರುವ ಎಲ್ಲಾ ಪ್ರಮುಖ ಹುದ್ದೆಗಳೂ ಸಾರ್ವಜನಿಕ ವಿಶ್ಲೇಷಣೆಗೆ ಒಳಪಡಬೇಕು, ಮುಖ್ಯ ನ್ಯಾಯಮೂರ್ತಿಗಳು ಇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಿಸಬೇಕು, ಪ್ರಧಾನಿ ಕೂಡ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಿಸುತ್ತಾರೆ ಎಂದು ಚೆಲಮೇಶ್ವರ್ ಹೇಳಿದರು.

ನಿವೃತ್ತ ಜೀವನದಲ್ಲಿ ಬೇರೆ ಯಾವುದೇ ಹುದ್ದೆ ವಹಿಸಿಕೊಳ್ಳದೇ ಇರಲು ನಿರ್ಧರಿಸಿರುವ ಅವರು, ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ತಮ್ಮ ಹುಟ್ಟೂರು ಹಾಗೂ ಹೈದರಾಬಾದ್ ನಲ್ಲಿ ನಿವೃತ್ತ ಜೀವನ ನಡೆಸುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News