ಗೋಹತ್ಯೆ ಶಂಕೆಯಲ್ಲಿ 65 ವರ್ಷದ ವೃದ್ಧನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

Update: 2018-06-23 08:03 GMT

ಹಾಪುರ್, ಜೂ.23: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲಖುವ ಗ್ರಾಮದಲ್ಲಿ ಗುಂಪೊಂದು ಗೋಹತ್ಯೆ ಶಂಕೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬರನ್ನು ಥಳಿಸಿ ಕೊಂದ ಹಾಗೂ 65 ವರ್ಷದ ವೃದ್ಧರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆಯ ಎರಡನೆ ವೀಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಘಟನೆಯ ಕಾರಣದ ಬಗ್ಗೆ ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ. 

ಒಂದು ನಿಮಿಷ ಅವಧಿಯ ವೀಡಿಯೋದಲ್ಲಿ ಗುಂಪೊಂದು 65 ವರ್ಷದ ಸಮೀಯುದ್ದೀನ್ ರ ಗಡ್ಡವನ್ನು ಎಳೆಯುತ್ತಿರುವುದು ಹಾಗೂ ಅವರು ಗದ್ದೆಯಲ್ಲಿ ದನವನ್ನು ಹತ್ಯೆ ನಡೆಸುತ್ತಿದ್ದರು ಎಂದು ಹೇಳಲು ಬಲವಂತ ಪಡಿಸುತ್ತಿರುವುದು ಕಾಣಿಸುತ್ತದೆ. ಸಮೀಯುದ್ದೀನ್ ಬಟ್ಟೆಯಲ್ಲಿ ರಕ್ತದ ಕಲೆಗಳೂ ಕಾಣಿಸುತ್ತಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ಸಂದರ್ಭ ತೆಗೆದ ಇನ್ನೊಂದು ವೀಡಿಯೋದಲ್ಲಿ ಘಟನೆಯಲ್ಲಿ ಸಾವಿಗೀಡಾದ 45 ವರ್ಷದ ಖಾಸಿಂ ರಸ್ತೆಯಲ್ಲಿ ಬಿದ್ದುಕೊಂಡಿರುವುದು ಹಾಗೂ ನೀರಿಗಾಗಿ ಅಂಗಲಾಚುತ್ತಿದ್ದರೂ ಗುಂಪು ಆತನಿಗೆ ನೀರು ಕೊಡಲು ನಿರಾಕರಿಸುತ್ತಿರುವುದು ಕಾಣಿಸುತ್ತದೆ. ಖಾಸಿಂ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಖಾಸಿಂರನ್ನು ಪೊಲೀಸರ ಎದುರಲ್ಲಿಯೇ ಗುಂಪು ನೆಲದಲ್ಲಿ ಎಳೆದುಕೊಂಡು ಹೋಗುತ್ತಿರುವ ಫೋಟೋ ಒಂದೂ ಹರಿದಾಡುತ್ತಿದ್ದು, ಇದರ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು  ಕ್ಷಮಾಪಣೆ ಯಾಚಿಸಿದ್ದಾರೆ.

ಪೊಲೀಸರು ಸಂವೇದನಾರಹಿತರಾಗಿ ವರ್ತಿಸಿದ್ದರೆಂದು  ಇಲಾಖೆ ಒಪ್ಪಿಕೊಂಡಿದೆಯಲ್ಲದೆ ಆ ಕ್ಷಣದ ಆ ಪರಿಸ್ಥಿತಿಯಲ್ಲಿ ಅವರಿಗೆ ಖಾಸಿಂರನ್ನು ಆಸ್ಪತ್ರೆಗೆ ದಾಖಲಿಸುವುದು ಅತ್ಯಂತ ಮುಖ್ಯವಾಗಿತ್ತು ಎಂದು ಹೇಳಿದೆ.

ಈತನ್ಮಧ್ಯೆ ಖಾಸಿಂ ಮತ್ತು ಸಮೀಯುದ್ದೀನ್ ಕುಟುಂಬಗಳೆರಡೂ ಪತ್ರಿಕಾಗೋಷ್ಠಿ ನಡೆಸಿ ಘಟನೆಗೆ ವಾಹನ ಚಲಾವಣೆ ಸಂದರ್ಭ ನಡೆದ ಬೀದಿ ಜಗಳ ಕಾರಣ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿವೆ.

ಘಟನೆಯ ನಿಜವಾದ ಕಾರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಮೃತ ಖಾಸಿಂ ಸೋದರ ಬೈಕುಗಳ ವಿಚಾರವಾಗಿ ನಡೆದ ಜಗಳದ ಬಗ್ಗೆ ಹೇಳಿದ್ದಾರೆ. ಅವರ ಕುಟುಂಬ ಇನ್ನೊಂದು ದೂರು ನೀಡಿದರೆ ಅದನ್ನು ಎಫ್‍ಐಆರ್ ನಲ್ಲಿ ಸೇರಿಸಲಾಗುವುದು ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News