ಐವರ ಸಾವಿಗೆ ಕಾರಣವಾಗಿ 120 ಮಂದಿ ಆಸ್ಪತ್ರೆ ಸೇರುವಂತೆ ಮಾಡಿದ ಮಹಿಳೆ

Update: 2018-06-23 08:40 GMT

ರಾಯ್ಗಡ್, ಜೂ.23: ತಾನು ಕಪ್ಪಗಿದ್ದೇನೆಂದು ಸಂಬಂಧಿಕರು ಮಾಡುತ್ತಿದ್ದ ಅಪಹಾಸ್ಯದಿಂದ ಆಕ್ರೋಶಗೊಂಡ ಮಹಿಳೆಯೊಬ್ಬಳು ಐವರ ಸಾವಿಗೆ ಕಾರಣವಾಗಿ, 120 ಮಂದಿ ಆಸ್ಪತ್ರೆ ಸೇರುವ ಹಾಗೆ ಮಾಡಿದ ಘಟನೆಯೊಂದು ನಡೆದಿದೆ.

ಮಹಾರಾಷ್ಟ್ರದ ರಾಯ್ಗಡ್ ನಲ್ಲಿ ಈ ಘಟನೆ ನಡೆದಿದ್ದು, ತನ್ನ ಕಪ್ಪು ಬಣ್ಣದ ಬಗ್ಗೆ ಹಾಗು ಅಡುಗೆಯ ಬಗ್ಗೆ ಸಂಬಂಧಿಕರ ಚುಚ್ಚು ಮಾತುಗಳಿಂದ ಕೋಪಗೊಂಡ ಪ್ರಗ್ಯಾ ಸುರ್ವಾಸೆ ಎಂಬ ಮಹಿಳೆ ಗೃಹಪ್ರವೇಶ ಕಾರ್ಯಕ್ರಮದ ಅಡುಗೆಯಲ್ಲಿ ವಿಷ ಬೆರೆಸಿದ್ದಾಳೆ. ಆಹಾರ ಸೇವಿಸಿದವರಲ್ಲಿ 120 ಮಂದಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ನಾಲ್ವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ.

ಊಟ ಮಾಡಿದ ನಂತರ ಎಲ್ಲರಿಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಾಂತಿ ಮಾಡಲು ಆರಂಭಿಸಿದ್ದರು. ಕೂಡಲೇ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನುವುದು ಪೊಲೀಸರಿಗೆ ತಿಳಿದ ನಂತರ ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿತ್ತು.

ಕೂಡಲೇ ಪೊಲೀಸರು ತನಿಖೆ ಆರಂಭಿಸಿದರು. ಮನೆಯ ಸಮೀಪ ಪೊಲೀಸರಿಗೆ ವಿಷದ ಬಾಟಲ್ ಲಭಿಸಿತ್ತು. ಪ್ರತಿಯೊಬ್ಬರನ್ನೂ ಪೊಲೀಸರು ವಿಚಾರಿಸಿದ್ದು, ಸುರ್ವಾಸೆಯ ವರ್ತನೆ ಹಾಗು ಮಾತುಗಳು ಪೊಲೀಸರಲ್ಲಿ ಸಂಶಯ ಮೂಡಿಸಿತ್ತು . ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಏನೆಂದು ಬಾಯ್ಬಿಟ್ಟಿದ್ದಾಳೆ.

ಆಕೆಯನ್ನು ಬಂಧಿಸಲಾಗಿತ್ತು, ಕೊಲೆ,ಕೊಲೆ ಯತ್ನ ಸೇರಿ ಇನ್ನಿತರ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News