"ನಾವು ಎಫ್‌ಐಆರ್ ದಾಖಲಿಸುವಾಗ ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂದು ಪೊಲೀಸರು ಹೇಳಿದರು"

Update: 2018-06-23 09:05 GMT

ಲಕ್ನೋ, ಜೂ.23: ಹಾಪುರ್ ನಲ್ಲಿ ಗುಂಪಿನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 65 ವರ್ಷದ ಸಮೀವುದ್ದೀನ್ ಅವರ ಹಿರಿಯ ಸೋದರ ಮೆಹ್ರುದ್ದೀನ್ ಸುದ್ದಿಗಾರರ ಜತೆ ಮಾತನಾಡುತ್ತಾ, ಘಟನೆಯ ದಿನ ಕುಟುಂಬದ ಸದಸ್ಯರೊಬ್ಬರು ದೂರು ದಾಖಲಿಸಲು ನಿರ್ಧರಿಸಿದಾಗ ಆ ದೂರಿನಲ್ಲಿ ಒಂದಲ್ಲಾ ಒಂದು ವಿಚಾರ ಸರಿಯಿಲ್ಲವೆಂದು ಪೊಲೀಸರು ತಿಳಿಸಿದ್ದರೆಂದು ಬಹಿರಂಗಪಡಿಸಿದ್ದಾರೆ. ಈ ಘಟನೆಯಲ್ಲಿ ಖಾಸಿಂ ಎಂಬವರನ್ನು ಗುಂಪು ಥಳಿಸಿ ಕೊಲೆಗೈದಿದೆ.

‘‘ನಮಗೆ ಬೇಕಿದ್ದ ಹಾಗೆ ಎಫ್‌ಐಆರ್ ದಾಖಲಾಗಿಲ್ಲ, ನಮಗೆ ಭಯವಾಗಿದೆ. ಈ ಬಗ್ಗೆ ಏನನ್ನೂ ನಮಗೆ ಹೇಳಲು ಸಾಧ್ಯವಿಲ್ಲ ನಾವು ಏನೂ ಹೇಳದೇ ಇದ್ದರೇ ಒಳ್ಳೆಯದು ನಮಗೆ ಏನಾಗಬಹುದೆಂದು ನಮಗೆ ತಿಳಿದಿಲ್ಲ’’ ಎಂದು ಮೆಹ್ರುದ್ದೀನ್ ಹೇಳಿದ್ದಾರೆ.

‘‘ನನ್ನ ಸೋದರ ಯಾಸೀನ್ ದೂರು ಬರೆಯಲುಯತ್ನಿಸಿದಾಗ, ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂದು ಪೊಲೀಸರು ಹೇಳಿದರು. ಆಗ ನಮಗೆ ಸಮೀವುದ್ದೀನ್ ಎಲ್ಲಿದ್ದಾರೆಂದು ತಿಳಿದಿರಲಿಲ್ಲ. ಇಂತಹ ಒಂದು ಪರಿಸ್ಥಿತಿಯಲ್ಲಿ ನಮಗೆ ನ್ಯಾಯ ಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ನಮಗೆ ರಕ್ಷಣೆ ಬೇಕು ಹಾಗೂ ಆತನಿಗೆ ಚಿಕಿತ್ಸೆ ದೊರೆಯಬೇಕು ಎಂದು ಹೇಳಿದ್ದೆವು. ಇದೆಲ್ಲಾ ಆಗುವುದು ಇದಕ್ಕೆ ಸಹಿ ಹಾಕಿ ಎಂದಾಗ ನನ್ನ ಸೋದರ ಹಾಗೆಯೇ ಮಾಡಿದ’’ ಎಂದು ಸೋಮವಾರ ಮೆಹ್ರುದ್ದೀನ್ ಹೇಳಿದ್ದರು.

ಮೆಹ್ರುದ್ದೀನ್ ಪ್ರಕಾರ ಸಮೀವುದ್ದೀನ್ ಪಶು ಆಹಾರವನ್ನು ತರಲು ಗದ್ದೆಯತ್ತ ಹೋಗಿದ್ದಾಗ ಅಲ್ಲಿ ಖಾಸಿಂ ಕೂಡ ಇದ್ದರು, ಕೆಲ ಜನ ಅಲ್ಲಿಗೆ ಬಂದು ಖಾಸಿಂಗೆ ಹೊಡೆಯಲಾರಂಭಿಸಿದ್ದರು. ಇದನ್ನು ಸಮೀವುದ್ದೀನ್ ಪ್ರಶ್ನಿಸಿದಾಗ ಅವರನ್ನೂ ಥಳಿಸಲಾಯಿತು’’ ಎಂದು ಮೆಹ್ರುದ್ದೀನ್ ಹೇಳುತ್ತಾರೆ.

ಅತ್ತ ಈ ಘಟನೆಯಲ್ಲಿ ಮೃತಪಟ್ಟ ಖಾಸಿಂ ಸೋದರ ಮುಹಮ್ಮದ್ ನದೀಂ ಮಾತನಾಡುತ್ತಾ, ‘‘ಸೋಮವಾರ ಅಪರಾಹ್ನ ಪಶು ಆಹಾರ ತರಲು ಆತನಿಗೆ ಹೇಳಲಾಗಿತ್ತು. ಆತ ಗೋವು ಮತ್ತು ಇತರ ಪ್ರಾಣಿಗಳ ವ್ಯಾಪಾರಿಯಾಗಿದ್ದ. ಅವರಿಗೆ ಜಗಳವಾಗಿತ್ತೇ ಗೊತ್ತಿಲ್ಲ, ಆತ ಕಸಾಯಿ, ಮುಸ್ಲಿಮ್ ಎಂದು ತಿಳಿದು ಥಳಿಸಲಾಯಿತು. ಒಬ್ಬರು ಆತನಿಗೆ ನೀರು ಕೊಡಲು ಹೇಳಿದರೂ ಆತ ಕಸಾಯಿ, ಸಾಯಲಿ, ನೀರು ಕೊಡಬೇಡಿ ಎಂದು ಇನ್ನೊಬ್ಬ ಹೇಳಿದ್ದ’’ ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News