ಬೆಂಗಳೂರು: ಅಮೆರಿಕಾ ವಲಸೆ ನೀತಿ ಖಂಡಿಸಿ ಪ್ರತಿಭಟನೆ

Update: 2018-06-23 12:35 GMT

ಬೆಂಗಳೂರು, ಜೂ.23: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಿಸಿದ ಅಮೆರಿಕಾ ವಲಸೆ ನೀತಿ ವಿರೋಧಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್ಸೆಸ್ ಸಂಘಟನೆ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಡೊನಾಲ್ಡ್ ಟ್ರಂಪ್ ಘೋಷಿಸಿರುವ ಅಮೆರಿಕಾ ವಲಸೆ ನೀತಿಯು, ವಲಸಿಗರ ಹಾಗು ಅವರ ಮಕ್ಕಳ ವಿರುದ್ಧ ಎಸಗಿದ ಅನಿರೀಕ್ಷಿತ ಕ್ರೌರ್ಯದ ಕ್ರಮವಾಗಿದೆ. ಮಕ್ಕಳ ಮೇಲಿನ ಈ ಅಮಾನವೀಯ ಕ್ರಿಯೆಯನ್ನು ಅಮೆರಿಕಾ ನಾಗರಿಕರು ತೀವ್ರವಾಗಿ ಖಂಡಿಸಿದ್ದು, ಇತರ ದೇಶಗಳ ಜನರಿಂದಲೂ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿಯು ಈ ನೀತಿಯನ್ನು ಮಗುವಿನ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸಿದೆ. ಹೀಗಾಗಿ, ಕೂಡಲೇ ಈ ವಲಸೆ ನೀತಿ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಶೋಭ ಮಾತನಾಡಿ, ವಲಸಿಗ ಕುಟುಂಬಗಳನ್ನು ಅಮೆರಿಕಾ ಗಡಿಯಲ್ಲಿ ಬೇರ್ಪಡಿಸಿ, ಅವರ ಮಕ್ಕಳನ್ನು ಬಂಧನದಲ್ಲಿಡುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕ್ರೂರ ಮತ್ತು ಜನಾಂಗೀಯವಾದಿ ಆದೇಶ ಮಾಡಿದ್ದಾರೆ ಎಂದು ಕಿಡಿಕಾರಿದರು.

ದೇಶದ ಅಪರಾಧಿ ಪ್ರವೇಶ ಕಟ್ಟಳೆಯಡಿ ಕಾನೂನುಬಾರವಾಗಿ ಗಡಿಯನ್ನು ದಾಟಿ ಬರುವ ವಲಸಿಗರ ವಿರುದ್ಧ ಹೊರಡಿಸಲಾಗಿರುವ ಆದೇಶವು, ಅಮೆರಿಕಾ-ಮೆಕ್ಸಿಕೊ ಗಡಿಯಲ್ಲಿನ ಸಾವಿರಾರು ಮಕ್ಕಳು ತಮ್ಮ ಕುಟುಂಬಗಳಿಂದ ಒತ್ತಾಯ ಪೂರ್ವಕವಾಗಿ ಬೇರ್ಪಟ್ಟಿದ್ದಾರೆ. ಪ್ರಸ್ತುತ, 10 ಸಾವಿರಕ್ಕೂ ಅಧಿಕ ವಲಸೆ ಮಕ್ಕಳನ್ನು ಬಂಧಿಸಲಾಗಿದ್ದು, ಅವರನ್ನು ಪಂಜರದಂತಹ ಗೂಡುಗಳಲ್ಲಿ ಇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಲಸಿಗರ ಮಕ್ಕಳಿಗಾಗಿ ನಡೆಯುತ್ತಿರುವ ಗೃಹನಿರ್ಮಾಣ, ಸಾರಿಗೆ ಮತ್ತು ಅವರ ಮೇಲೆ ನಿಗಾ ಇಡುವ ಕಾರ್ಯ ಬಿಲಿಯನ್ ಡಾಲರ್ ವ್ಯಾಪಾರವಾಗಿದೆ. ಅಮೆರಿಕಾ ಸರಕಾರವು ಶೋಕದಲ್ಲೂ ಸಂಪತ್ತು ಸೃಷ್ಟಿಸುವ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿದೆ ಎಂದ ಅವರು, ಅಮೆರಿಕಾ ವಿಶ್ವದ ಅತಿದೊಡ್ಡ ಭಯೋತ್ಪಾದಕ ದೇಶ ಎನ್ನಬಹುದು ಎಂದು ಹೇಳಿದರು.

ವಿದ್ಯಾರ್ಥಿ ಮುಖಂಡ ಅಜಯ್ ಕಾಮತ್ ಮಾತನಾಡಿ, ತನ್ನ ಆರ್ಥಿಕ ಹಾಗೂ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಲು, ಯುದ್ಧಗಳಲ್ಲಿ ತೊಡಗುವ ಮೂಲಕ ಹಾಗೂ ಹಲವಾರು ದೇಶಗಳ ಜನ ವಿರೋಧಿ ಭಯೋತ್ಪಾದಕ ಗುಂಪುಗಳಿಗೆ ಕುಮ್ಮಕ್ಕು ಕೊಡುವ ಮೂಲಕ ಅಮೆರಿಕಾ ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಬಂಡವಾಳಶಾಹಿ ಪದ್ದತಿಯ ಕ್ರೂರ ಶೋಷಣೆಯ ಫಲವಾಗಿ, ಹಲವಾರು ದೇಶಗಳಲ್ಲಿ ಜನರು ದಿವಾಳಿಯಾಗುತ್ತಿದ್ದಾರೆ. ಹಾಗಾಗಿ, ತಮ್ಮ ದೇಶಗಳಲ್ಲಿ ಬದುಕುವುದು ಕಷ್ಟವಾಗಿ, ಉತ್ತಮ ಜೀವನಕ್ಕಾಗಿ ಅನಿವಾರ್ಯವಾಗಿ ವಲಸೆ ಹೋಗುತ್ತಿದ್ದಾರೆ. ವಲಸೆ ಬಂದವರನ್ನು ಅಮೆರಿಕಾ ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ವಲಸಿಗರು ಮೂಲ ಅಮೆರಿಕನ್ನರ ಉದ್ಯೋಗ ಕಸಿಯುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ, ಅಮೆರಿಕಾದ ಬಂಡವಾಳಶಾಹಿಗಳು, ಅಧಿಕ ಲಾಭ ಸೃಷ್ಟಿಸುವ ಸಲುವಾಗಿ ಮೂಲ ಅಮೆರಿಕನ್ನರನ್ನು ಕೆಲಸದಿಂದ ವಜಾಗೊಳಿಸಿ, ಕಡಿಮೆ ಸಂಬಳಕ್ಕೆ ಹೆಚ್ಚಿಗೆ ದುಡಿಯಲು ವಲಸಿಗರನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಇಂದಿನ ಎಲ್ಲ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆ ಮೂಲ ಕಾಣವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News