ವಿಜ್ಞಾನಕ್ಕೆ ಒತ್ತು ನೀಡದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ: ಪ್ರೊ.ಸಿ.ಎನ್.ಆರ್.ರಾವ್

Update: 2018-06-23 14:29 GMT

ಬೆಂಗಳೂರು, ಜೂ.23: ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡದಿದ್ದರೆ, ಭಾರತ ದೇಶಕ್ಕೆ ಭವಿಷ್ಯವಿಲ್ಲ ಎಂದು ಭಾರತರತ್ನ ಪ್ರೊ.ಸಿ.ಎನ್.ಆರ್. ರಾವ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ, ಮನೆಯಂಗಳದಲ್ಲಿ ಮಾತುಕತೆ -200ನೆ ಸಂಚಿಕೆಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಹಗಲಿರುಳು ದುಡಿಯುತ್ತಾರೆ. ಆದರೆ, ಇದೇ ವಾತಾವರಣ ನಮ್ಮ ದೇಶದಲ್ಲಿಯೂ ನಿರ್ಮಾಣವಾಗಬೇಕು. ಜೊತೆಗೆ ವಿಜ್ಞಾನದ ಕಡೆ ಹೆಚ್ಚಿನ ಒಲವು ನೀಡದಿದ್ದರೆ ಭವಿಷ್ಯ ಇಲ್ಲದಂತೆ ಆಗಲಿದೆ ಎಂದು ನುಡಿದರು.

ಜಗತ್ತಿನಲ್ಲಿ ಹಲವು ವಿಜ್ಞಾನಿಗಳಿದ್ದರೂ, ಗಮನಿಸುವಂಥ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ ಎಂದ ಅವರು, ನನಗೆ ವಿಜ್ಞಾನ ಬಿಟ್ಟು ಇನ್ನೇನು ಮಾಡಲು ಆಗುವುದಿಲ್ಲ, ಯೋಚಿಸುವುದಿಲ್ಲ. ಸಂಗೀತ, ಸಾಹಿತ್ಯ ಯಾವುದೇ ಆದರೂ ಒಂದೊಂದೇ ಆಸಕ್ತಿ ಇರಬೇಕು. ಆಗಲೇ, ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ವಿಜ್ಞಾನದ ರಾಜಧಾನಿ ಬೆಂಗಳೂರು: ಬೆಂಗಳೂರು ಸಿಲಿಕಾನ್ ಸಿಟಿ ಆಗಿದೆ. ಆದರೆ, ಬೆಂಗಳೂರು ಭಾರತದ ವಿಜ್ಞಾನದ ರಾಜಧಾನಿಯೂ ಆಗಿದ್ದು, ನಮ್ಮ ಜನಪ್ರತಿನಿಧಿಗಳು, ಸರಕಾರಗಳು ಇದನ್ನು ಹೇಳುವುದಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.

ಬಹುಮಾನಗಳ ನಿರೀಕ್ಷೆಯಲ್ಲಿ ಸಾಧನೆಯ ಹಾದಿ ಡಿಯುವುದಕ್ಕಿಂತ ಸಾಧನೆಯ ಹಾದಿಯಲ್ಲಿ ಸದಾ ಹೊಸ ಆಲೋಚನೆಗಳೊಂದಿಗೆ ನಮ್ಮ ಕ್ಷೇತ್ರದಲ್ಲಿ ಕಾರ್ಯನಿರ್ವಸಿದ್ದಲ್ಲಿ ಬಹುಮಾನ ಹಾಗೂ ಹಣ ಬಂದೇ ಬರುತ್ತದೆ. ಬಹುಮಾನಗಳಿಗಾಗಲಿ ಹಣಕ್ಕಾಗಲಿ ಕೆಲಸ ಮಾಡುವುದಕ್ಕಿಂತ ನಮಗೆ ನಾವೇ ಹೆಮ್ಮೆ ಪಡುವಂತ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ನಾನು 6ನೇ ತರಗತಿವರೆಗೂ ಮನೆಯಲ್ಲಿಯೇ ಕಲಿತು ನಂತರ ಕನ್ನಡ ಮಾಧ್ಯಮ ಶಾಲೆಗೆ ಸೇರಿದೆ. ಓದಿದ್ದೆಲ್ಲಾ ಕನ್ನಡ ಮಾಧ್ಯಮದಲ್ಲಾದರೂ ಇಂದು ವಿಜ್ಞಾನ ಕ್ಷೇತ್ರದಲ್ಲಿ ಹಲವು ದೇಶಗಳನ್ನು ಸುತ್ತಿದ್ದೇನೆ. ಸಿ.ವಿ.ರಾಮನ್ ನನಗೆ ತುಂಬಾ ಬೇಕಾದವರು. ನನ್ನ ಮೊದಲ ಪುಸ್ತಕ ಬಂದಾಗ ನನಗೆ 24 ವರ್ಷ. ನನ್ನ ಎರಡನೇ ಪುಸ್ತಕ ಬಂದಾಗ 29 ವರ್ಷ. ಪುಸ್ತಕ ಓದಿದ ಸಿ.ವಿ.ರಾಮನ್ 1963ರಲ್ಲಿ ಕಾಗದ ಬರೆದರು. ಈ ಪುಸ್ತಕ ಬರೆದವರು ನಮ್ಮ ಅಕಾಡೆಮಿ ಸದಸ್ಯರು ಆಗಬೇಕು ಎಂದಿದ್ದರು. ನನ್ನನ್ನು ಸದಸ್ಯನನ್ನಾಗಿ ಮಾಡಿದ್ದರು. ನಾನು ಅವರನ್ನು ಭೇಟಿಯಾದಾಗ ಅವರಿಗೆ 81 ವರ್ಷ. ಬೆಂಗಳೂರಿನಲ್ಲಿ ವಾರ್ಷಿಕ ಅಧಿವೇಶನ ಮಾಡಿದ್ರು. ನಾನು ಐಐಟಿ ಕಾನ್‌ಪುರದಲ್ಲಿ ಪ್ರಾಧ್ಯಾಪಕನಾಗಿದ್ದೆ. ಮತ್ತೆ ವಾಪಸ್ ಬಂದೆ. ನೀವು ಇಲ್ಲಿಗೆ ಬಂದು ಸಂಶೋಧನೆ ಮಾಡಬೇಕು ಅಂದರು. ಬಂದು ಸೇರಿಕೊಂಡೆ ಎಂದು ಪ್ರೊ.ರಾವ್ ನೆನಪು ಮಾಡಿಕೊಂಡರು.

ಬಿಸ್ಮಿಲ್ಲಾ ಖಾನ್, ನಾನು ಸಾಯುವವರೆಗೂ ಸಂಗೀತದಲ್ಲಿ ಇರಬೇಕು ಅಂತ ಕೇಳಿಕೊಳ್ಳುತ್ತಿದ್ದರು. ಅದೇ ರೀತಿ, ಕೊನೆಯ ಉಸಿರಿರುವವರೆಗೂ ನಾನು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಕೋರುತ್ತೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಿ.ಎನ್.ಆರ್. ರಾವ್ ಅವರ ಜೀವನ-ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಸಚಿವೆ ಡಾ.ಜಯಮಾಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಸೇರಿ 200 ಸಂಚಿಕೆಗಳಲ್ಲಿ ಪಾಲ್ಗೊಂಡ ಸಾಧಕರು, ಇಲಾಖೆಯ ನಿರ್ದೇಶಕರು ಹಾಗೂ ಉನ್ನತ ಅಧಿಕಾರಿಗಳು ಭಾಗವಸಿದ್ದರು.

ವಿಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವ ಪ್ರಮಾಣ ಶೇ 0.9 ಇದೆ. ಇದು ಶೇ 1 ಕ್ಕಿಂತ ಕಡಿಮೆ. ಈ ದುಡ್ಡು ಸಹ ಬಾಹ್ಯಾಕಾಶ, ಅಣು ವಿಜ್ಞಾನಕ್ಕೆ ಕ್ಷೇತ್ರಕ್ಕೆ ಹೋಗುತ್ತೆ. ಹೀಗಾದರೆ, ವಿಜ್ಞಾನ ಕ್ಷೇತ್ರ ಮುಂದೆ ಬರೋದು ಹೇಗೆ ಸಾಧ್ಯ.
-ಪ್ರೊ.ಸಿ.ಎನ್.ಆರ್.ರಾವ್ ಭಾರತ ರತ್ನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News