ಈ ಶಾಸಕ ನಿದ್ದೆ ಮಾಡಿದ್ದೆಲ್ಲಿ ಎಂದು ತಿಳಿದರೆ ದಂಗಾಗುತ್ತೀರಿ...!

Update: 2018-06-24 04:09 GMT

ಹೈದರಾಬಾದ್, ಜೂ. 24: ಸ್ಮಶಾನದ ಆಧುನೀಕರಣ ಕಾಮಗಾರಿಯಲ್ಲಿ ನಿರತರಾದ ನಿರ್ಮಾಣ ಕಾರ್ಮಿಕರಿಗೆ ರಾತ್ರಿ ಅಲ್ಲಿ ತಂಗಲು ಭಯ. ಇದನ್ನು ಹೋಗಲಾಡಿಸಲು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಲಕೋಲ್ ಕ್ಷೇತ್ರದ ತೆಲುಗುದೇಶಂ ಶಾಸಕ ಒಂದು ವಿನೂತನ ಪ್ರಯತ್ನ ಮಾಡಿದರು. ಸೊಳ್ಳೆಕಡಿತ, ಗಬ್ಬುವಾಸನೆ ಎಲ್ಲವನ್ನೂ ಸಹಿಸಿಕೊಂಡು ಸ್ಮಶಾನದಲ್ಲೇ ರಾತ್ರಿಯಿಡೀ ನಿದ್ರಿಸಿ, ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದರು.

ಶುಕ್ರವಾರ ರಾತ್ರಿ ಪಲಕೋಲ್ ಶಾಸಕ ನಿಮ್ಮಲರಾಮ ನಾಯ್ಡು ಅವರ ಊಟ ಹಾಗೂ ನಿದ್ದೆ ಎರಡೂ ಸ್ಮಶಾನದಲ್ಲೇ ಕಳೆಯಿತು. ಮಡಚುವ ಮಂಚ ಹಾಕಿಕೊಂಡು ಸುಖನಿದ್ದೆಗೆ ಜಾರಿದ ಶಾಸಕ, ಬೆಳಗ್ಗೆ ಮನೆಗೆ ಮರಳಿದರು. ಕಾಮಗಾರಿ ವೀಕ್ಷಣೆಗಾಗಿ ಮತ್ತೆ ಶನಿವಾರ ಮಧ್ಯಾಹ್ನ ಆಗಮಿಸಿದರು.

"ಇನ್ನೂ ಎರಡು ಮೂರು ದಿನ ನಾನು ಅದೇ ಸ್ಥಳದಲ್ಲಿ ನಿದ್ರಿಸುತ್ತೇನೆ. ನಿರ್ಮಾಣ ಕಾರ್ಮಿಕರು ಸ್ಮಶಾನಕ್ಕೆ ಪ್ರವೇಶಿಸಲು ಹೆದರುತ್ತಾರೆ. ಆದ್ದರಿಂದ ಅಂಥ ಕಾರ್ಮಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಇದು" ಎನ್ನುತ್ತಾರೆ. ನಗರದ ಹಿಂದೂ ಸ್ಮಶಾನ ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅದನ್ನು ಅಭಿವೃದ್ಧಿಪಡಿಸಲು ಶಾಸಕರು ಮುಂದಾಗಿದ್ದಾರೆ.

"ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಸೂಕ್ತ ಸೌಲಭ್ಯಗಳಿಲ್ಲ. ಮಳೆಗಾಲದಲ್ಲಿ ಇಡೀ ಸ್ಮಶಾನ ಮೈದಾನ ಕೆಸರುಗದ್ದೆಯಾಗುತ್ತದೆ. ಯಾರೂ ಹೆಜ್ಜೆ ಇಡುವುದೂ ಸಾಧ್ಯವಿಲ್ಲದಾಗುತ್ತದೆ. ಶವಸಂಸ್ಕಾರ ಬಳಿಕ ಸ್ನಾನಕ್ಕೂ ವ್ಯವಸ್ಥೆ ಇಲ್ಲ. ಇದರ ಪಕ್ಕದಲ್ಲೇ ದೊಡ್ಡ ಕಸದ ರಾಶಿ ಇದ್ದು, ದುರ್ವಾಸಬೆ ಬರುತ್ತಿರುತ್ತದೆ" ಎಂದು ವಿವರಿಸಿದರು. ಶಾಸಕರ ಮನವಿ ಮೇರೆಗೆ ಸರ್ಕಾರ ಎಂಟು ತಿಂಗಳ ಹಿಂದೆ ಮೂರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಅದರೆ ಕೆಲಸಗಾರರು ಕೆಲಸ ಮಾಡುವ ವೇಳೆ ಶವದ ಕಳೇಬರಹಗಳನ್ನು ನೋಡಿದ ಹಿನ್ನೆಲೆಯಲ್ಲಿ ಭೀತಿಯಿಂದ ಯಾರೂ ಕೆಲಸಕ್ಕೆ ಬರುತ್ತಿಲ್ಲ. ಅವರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಶಾಸಕರ ವಿನೂತನ ಪ್ರಯತ್ನ ಜನಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News