ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿದ ಮಧ್ಯಪ್ರದೇಶ ಸಚಿವೆ !

Update: 2018-06-24 04:32 GMT

ಭೋಪಾಲ್, ಜೂ. 24: ಅಧಿಕಾರದಲ್ಲಿರುವವರೇ ಮೂಢನಂಬಿಕೆಯನ್ನು ಆಚರಿಸುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಲಿತಾ ಯಾದವ್, ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಛತ್ತರ್‌ಪುರ ದೇವಾಲಯದಲ್ಲಿ ಸುಧೀರ್ಘ ಧಾರ್ಮಿಕ ವಿಧಿಗಳೊಂದಿಗೆ ಈ ಕಪ್ಪೆ ವಿವಾಹ ನೆರವೇರಿಸಿದ್ದಾರೆ ಎನ್ನಲಾಗಿದ್ದು, ಪ್ರಜ್ಞಾವಂತ ನಾಗರಿಕರು ಈ ಮೂಢನಂಬಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡ ಜತೆಗೆ ಆಷಾಢ ಉತ್ಸವ ಆಚರಿಸಿದ ಸಚಿವೆಯ ಸಮ್ಮುಖದಲ್ಲೇ ಅರ್ಚಕರು ಕಪ್ಪೆಗಳ ಮದುವೆ ನೆರವೇರಿಸಿದರು. ಆ ಬಳಿಕ ಭರ್ಜರಿ ಹಬ್ಬದೂಟ ವ್ಯವಸ್ಥೆ ಮಾಡಲಾಗಿತ್ತು. ಈ ವಿಶಿಷ್ಟ ಮದುವೆ ವೀಕ್ಷಣೆಗೆ ನೂರಾರು ಮಂದಿ ಕುತೂಹಲದಿಂದ ಸೇರಿದ್ದರು.

"ಮಳೆ ದೇವರನ್ನು ಮೆಚ್ಚಿಸಲು ಕಪ್ಪೆಗಳ ಮದುವೆ ಮತ್ತು ಔತಣ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ" ಎಂದು ದೇವಾಲಯದ ಅರ್ಚಕ ಆಚಾರ್ಯ ಬ್ರಿಜುನಂದನ್ ಹೇಳಿದ್ದಾರೆ. ಈ ಬಾರಿ ರಾಜ್ಯಕ್ಕೆ ಉತ್ತಮ ಮಳೆಯಾಗುತ್ತದೆ ಎನ್ನುವುದು ಅವರ ನಂಬಿಕೆ. 

ಜನರಲ್ಲಿ ಮೂಢನಂಬಿಕೆಯನ್ನು ಬೆಳೆಸುವಂಥ ಇಂಥ ಆಚರಣೆಯಲ್ಲಿ ಸಚಿವರೇ ಭಾಗಿಯಾಗಿರುವುದು ಖಂಡನೀಯ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಲೋಕ್ ಚತುರ್ವೇದಿ ಟೀಕಿಸಿದ್ದಾರೆ. ಸಚಿವೆ ನೀರಿಲ್ಲದ ಪ್ರದೇಶಕ್ಕೆ ನೀರು ಪೂರೈಸುವ ಬದಲು ಇಂಥ ವಿಧಿವಿಧಾನಗಳಲ್ಲಿ ತೊಡಗಿರುವುದು ಆಕ್ಷೇಪಾರ್ಹ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News