ಅನುವಾದ ಸಂಸ್ಕೃತಿಗಳ ಕೊಂಡಿ: ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ

Update: 2018-06-24 14:39 GMT

ಬೆಂಗಳೂರು, ಜೂ.24: ಅನುವಾದ ಎರಡು ಭಾಷೆ ಹಾಗೂ ಸಂಸ್ಕೃತಿಗಳ ನಡುವೆ ಕೊಟ್ಟು-ತೆಗೆದುಕೊಳ್ಳುವ ಸಂಬಂಧವನ್ನು ಬೆಸೆಯುವ ಕೊಂಡಿಯಾಗಿದೆ ಎಂದು ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕಸಾಪ ಸಭಾಂಗಣದಲ್ಲ್ಲಿ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ ಹಾಗೂ ಸೃಷ್ಟಿ ಪಬ್ಲಿಕೇಶನ್ ಬೆಂಗಳೂರು ಸಂಯುಕ್ತಾಶ್ರಯಲ್ಲಿ ಆಯೋಜಿಸಿದ್ದ ಲೇಖಕಿ ಡಾ.ವೈಶಾಲಿ ಕನ್ನಡಕ್ಕೆ ಅನುವಾದಿಸಿರುವ ‘ಹಿಮ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅನುವಾದವೆಂದರೆ ಯಾಂತ್ರಿಕವಾಗಿ ಹೇಳುವುದಲ್ಲ. ಬದಲಾಗಿ, ಭಾಷೆಯ ಮೂಲಕ ಪರಕಾಯ ಪ್ರವೇಶ ಮಾಡಿ, ಭಾಷೆಯ ಮೂಲಕ ವಿಶ್ವದ ಯಾವುದೇ ಭಾಗದ ಸ್ವಂತಿಕೆ, ಸಂಸ್ಕೃತಿ, ನಾಗರಿಕತೆ ಬಗ್ಗೆ ಬೆಳಕು ಚೆಲ್ಲುವುದಾಗಿದೆ. ಹೀಗಾಗಿ, ಎಲ್ಲ ಭಾಷೆಗಳ ನಡುವೆ ಮಾನವೀಯ ಸಂಬಂಧಗಳ್ನು ಬೆಸೆಯುವ ಶಕ್ತಿಯಿದೆ ಎಂದರು.

ಆಧುನಿಕ ಟರ್ಕಿಯಲ್ಲಿ ಜಾತ್ಯತೀತವಾದ, ಆಧುನಿಕತೆ ಒಪ್ಪಬೇಕೆಂಬ ವಾದ ಆರಂಭವಾಯಿತು. ನಂತರ ಒಂದುಕಡೆ ಧರ್ಮ, ನಂಬಿಕೆ, ಆಧುನಿಕತೆ ಇವುಗಳ ನಡುವೆ ಎದುರಾಗುವ ಸಮುದಾಯದ ಸಂಘರ್ಷವನ್ನು ‘ಹಿಮ’ ಕಾದಂಬರಿಯಲ್ಲಿ ಹೇಳಲಾಗಿದೆ ಎಂದ ಅವರು, ಒಂದು ಶ್ರೇಷ್ಟ ಅನುವಾದ ನೇರವಾಗಿ ಕಣ್ಣಿಗೆ ಕಾಣದಿದ್ದರೂ, ಅದರ ಗ್ರಹಿಕೆ ಕಣ್ಣಿಗೆ ಕಾಣುವ ವಿಧಾನವನ್ನು ಗ್ರಹಿಸುತ್ತದೆ ಎಂಬುದನ್ನು ಈ ಕೃತಿ ಹೇಳುತ್ತದೆ ಎಂದು ತಿಳಿಸಿದರು.

ಈ ಕೃತಿಯಲ್ಲಿ ಬರುವ ಪಾತ್ರಗಳ ಹೆಸರು ವಿಭಿನ್ನ ಹಾಗೂ ವಿಚಿತ್ರವಾಗಿ ಕಂಡರೂ ಸಹ ಓದುತ್ತಾ ಹೋದ ಹಾಗೆ ನಮ್ಮ ನೆರೆ ಹೊರೆಯಲ್ಲಿ ನಡೆದ ಘಟನೆ ಎನ್ನುವಷ್ಟರ ಮಟ್ಟಿಗೆ ಓದುಗನನ್ನು ಕಾಡುತ್ತಾ ಹೋಗುತ್ತವೆ. ಇದರಲ್ಲಿ ವ್ಯಂಗವಿದೆ, ಕಂಟಕವಿದೆ, ಟಾಲ್ಸ್‌ಟಾಯ್ ಅವರನ್ನು ನೆನಪು ಮಾಡಿಕೊಳ್ಳುವ ಗಾಂಭೀರ್ಯತೆ ಇದೆ. ಹೀಗಾಗಿ, ಸುಲಭವಾಗಿ ಓದಿಸುವ ಜೊತೆಗೆ ಮನನ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಿಯತ್ರಿ ಶಾಲಿನಿ ಶ್ರೀನಿವಾಸ್ ‘ಹಿಮ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ನಂತರ ಮೊದಲ ಪ್ರತಿಯನ್ನು ಖರೀದಿಸಿದರು. ವಿಮರ್ಶಕ ಟಿಪಿ.ಅಶೋಕ್, ಲಲಿತಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಎಸ್. ಮೂರ್ತಿ, ಬರಹಗಾರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News