ನರೋಡಾ ಪಾಟಿಯಾ ಹತ್ಯಾಕಾಂಡ: ಮೂವರಿಗೆ 10 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದ ಹೈಕೋರ್ಟ್

Update: 2018-06-25 15:12 GMT

ಟೀಕಮ್‌ಗಡ(ಗುಜರಾತ್),ಜೂ.25: ಗುಜರಾತ್ ಉಚ್ಚ ನ್ಯಾಯಾಲಯವು ಸೋಮವಾರ 2002ರ ನರೋಡಾ ಪಾಟಿಯಾ ನರಮೇಧ ಪ್ರಕರಣದಲ್ಲಿ ಮೂವರು ದೋಷಿಗಳಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆಯನ್ನು ವಿಧಿಸಿದೆ. ಅವರಿಗೆ ವಿಧಿಸಲಾಗಿರುವ ಶಿಕ್ಷೆಯು ಅಪರಾಧದ ಕ್ರೌರ್ಯಕ್ಕೆ ಅನುಗುಣವಾಗಿದೆ ಎಂದು ಅದು ಹೇಳಿದೆ.

ಎ.20ರಂದು ಪ್ರಕಟಿಸಿದ್ದ ತೀರ್ಪಿನಲ್ಲಿ ಈ ಮೂವರು ಸೇರಿದಂತೆ ಒಟ್ಟು 16 ಜನರನ್ನು ದೋಷಿಗಳೆಂದು ಉಚ್ಚ ನ್ಯಾಯಾಲಯವು ಘೋಷಿಸಿತ್ತು.

ಎ.20ರ ತೀರ್ಪಿನ ಬಳಿಕ ದೋಷಿಗಳ ಪೈಕಿ ಪಿ.ಜೆ.ರಜಪೂತ,ರಾಜಕುಮಾರ ಚೌಮಾಲ ಮತ್ತು ಉಮೇಶ ಭರ್ವಾದ್ ಅವರು ತಮ್ಮನ್ನು ಸೂಕ್ತವಾಗಿ ಪ್ರತಿನಿಧಿಸಲಾಗಿರಲಿಲ್ಲ ಎಂಬ ಕಾರಣವನ್ನೊಡ್ಡಿ ತಮಗೆ ಶಿಕ್ಷೆಯ ಪ್ರಮಾಣದ ಕುರಿತು ಇನ್ನಷ್ಟು ವಿಚಾರಣೆಗಾಗಿ ಕೋರಿಕೊಂಡಿದ್ದರು.

ಈ ಮೂವರಿಗೆ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಹರ್ಷಾ ದೇವಾನಿ ಮತ್ತು ಎ.ಎಸ್.ಸುಪೇಹಿಯಾ ಅವರ ವಿಭಾಗೀಯ ಪೀಠವು ಪೊಲೀಸರೆದುರು ಶರಣಾಗಲು ಅವರಿಗೆ ಆರು ವಾರಗಳ ಗಡುವು ವಿಧಿಸಿದೆ.

ಶಿಕ್ಷೆಯ ಪ್ರಮಾಣ ಕುರಿತು ತನ್ನ ತೀರ್ಪಿನಲ್ಲಿ ಪೀಠವು, ಈ ಮೂವರೂ ಎಸಗಿರುವ ಅಪರಾಧಗಳು ಸಮಾಜದ ವಿರುದ್ಧವಾಗಿದ್ದವು ಮತ್ತು ಅವರಿಗೆ ದಂಡನೆಯು ಅಪರಾಧಗಳ ಕ್ರೌರ್ಯಕ್ಕೆ ಅನುಗುಣವಾಗಿರಬೇಕು ಎಂದು ಹೇಳಿತು.

ಕೊಲೆಯ ಹೊರತಾಗಿ ಇತರ ಅಪರಾಧಗಳಿಗಾಗಿ ಈ ಮೂವರನ್ನು ದೋಷಿಗಳೆಂದು ನ್ಯಾಯಾಲಯವು ತೀರ್ಪು ನೀಡಿದ್ದು,ಅವರಿಗೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಿತ್ತು.

ಕಡಿಮೆ ಶಿಕ್ಷೆ ವಿಧಿಸಿದರೆ ಅದು ನ್ಯಾಯದ ಅವಹೇಳನವಾಗುತ್ತದೆ. 10 ವರ್ಷಗಳ ಕಠಿಣ ಶಿಕ್ಷೆಯು ಸೂಕ್ತವಾದ ದಂಡನೆಯಾಗಿದೆ ಎಂದೂ ಪೀಠವು ಹೇಳಿತು.

ಈ ಮೂವರು ಹಿಂದೆ ಸಲ್ಲಿಸಿದ್ದ ಮನವಿಗಳಲ್ಲಿ ನ್ಯಾಯಾಲಯಕ್ಕೆ ಕನಿಷ್ಠ ಶಿಕ್ಷೆಯನ್ನು ವಿಧಿಸುವ ವಿವೇಚನಾಧಿಕಾರವಿರುವುದರಿಂದ ತಮ್ಮ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವಂತೆ ಕೋರಿಕೊಂಡಿದ್ದರು.

ವಿಶೇಷ ಸಿಟ್ ನ್ಯಾಯಾಲಯವು ಈ ಮೂವರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದರೆ ಮೇಲ್ಮನವಿಗಳ ವಿಚಾರಣೆ ನಡೆಸಿದ್ದ ಉಚ್ಚ ನ್ಯಾಯಾಲಯವು ಎ.20ರಂದು ನೀಡಿದ್ದ ತೀರ್ಪಿನಲ್ಲಿ ಇತರ 29 ಜನರ ಖುಲಾಸೆಯನ್ನು ಎತ್ತಿ ಹಿಡಿದಿತ್ತಾದರೂ ಈ ಮೂವರು ದೋಷಿಗಳು ಎಂದು ತೀರ್ಮಾನಿಸಿತ್ತು. ತನ್ನ ತೀರ್ಪಿನಲ್ಲಿ ಬಜರಂಗ ದಳ ನಾಯಕ ಬಾಬು ಬಜರಂಗಿ ಸೇರಿದಂತೆ 16 ಜನರು ದೋಷಿಗಳೆಂದು ಸಾರಿದ್ದ ಉಚ್ಚ ನ್ಯಾಯಾಲಯವು ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿ ಸೇರಿದಂತೆ ಇತರ 18 ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು.

ಸೋಮವಾರ ಶಿಕ್ಷೆ ವಿಧಿಸಲ್ಪಟ್ಟಿರುವ ಈ ಮೂವರನ್ನು ಹೊರತುಪಡಿಸಿ,ಇತರ 13 ದೋಷಿಗಳ ಪೈಕಿ 12 ಜನರಿಗೆ 21 ವರ್ಷಗಳ ಕಠಿಣ ಶಿಕ್ಷೆ ಮತ್ತು ಓರ್ವನಿಗೆ 10 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.

ವಿಶೇಷ ಸಿಟ್ ನ್ಯಾಯಾಲಯವು 2012,ಆಗಸ್ಟ್‌ನಲ್ಲಿ ಪ್ರಕರಣದಲ್ಲಿಯ ಒಟ್ಟು 61 ಆರೋಪಿಗಳ ಪೈಕಿ 32 ಜನರನ್ನು ಅಪರಾಧಿಗಳು ಎಂದು ಘೋಷಿಸಿ ತೀರ್ಪು ನೀಡಿದ್ದು,ಇತರ 29 ಜನರನ್ನು ಖುಲಾಸೆಗೊಳಿಸಿತ್ತು.

 ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದ ಮರುದಿನ,2002,ಫೆ.28ಂದು ಗುಂಪೊಂದು ಅಹ್ಮದಾಬಾದ್‌ನ ನರೋಡಾ ಪಾಟಿಯಾ ಪ್ರದೇಶದಲ್ಲಿ 97 ಜನರನ್ನು ಹತ್ಯೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News