ಈ ಶಿಕ್ಷಕ ಪಡೆದ ವರದಕ್ಷಿಣೆಗೆ ವ್ಯಾಪಕ ಪ್ರಶಂಸೆ!

Update: 2018-06-25 09:13 GMT

ಭುವನೇಶ್ವರ್, ಜೂ.25: ಕೇಂದ್ರಪುರ ಜಿಲ್ಲೆಯ 33 ವರ್ಷದ ಶಾಲಾ ಶಿಕ್ಷಕ ಸರೋಜಕಂಠ ಬಿಸ್ವಾಲ್ ಇತ್ತೀಚೆಗೆ ತಾನು ವಿವಾಹವಾಗಲು ನಿರ್ಧರಿಸಿದ ಯುವತಿಯ ತಂದೆಯ ಬಳಿ ಅಪರೂಪದ ವರದಕ್ಷಿಣೆ ಕೋರಿ ಅವರನ್ನು ಅಚ್ಚರಿಗೊಳಿಸಿದ್ದಾರೆ.

ಕೇಂದ್ರಪುರದ ಚೌಡಕುಲತ ಗ್ರಾಮದ ಜಗನ್ನಾಥ್ ವಿದ್ಯಾಪೀಠದಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಬಿಸ್ವಾಲ್ ಶಾಲಾ ಶಿಕ್ಷಕಿಯಾಗಿರುವ ರಶ್ಮಿರೇಖಾ ಪೈತಲ್ ಎಂಬಾಕೆಯನ್ನು ವಿವಾಹವಾಗಲು ಒಪ್ಪಿದಾಗ ಯಾವುದೇ ವರದಕ್ಷಿಣೆ ಬೇಡವೆಂದಿದ್ದರು. ಆದರೆ ಅವರ ಭಾವಿ ಮಾವ ಮಾತ್ರ ವರದಕ್ಷಿಣೆ ನೀಡುವುದಾಗಿ ಪಟ್ಟು ಹಿಡಿದಾಗ ಬಿಸ್ವಾಲ್ 1,001 ಹಣ್ಣಿನ ಗಿಡಗಳನ್ನು ನೀಡುವಂತೆ ಕೋರಿದ್ದಾರೆ.

ಬಿಸ್ವಾಲ್ ಅವರ ಈ ಹಸಿರು ಬೇಡಿಕೆಯನ್ನು ಅವರ ಭಾವಿ ಪತ್ನಿಯ ಮನೆಯವರು ಸಂತೋಷದಿಂದಲೇ ಒಪ್ಪಿದ್ದು ಜೂನ್ 21ರಂದು ಅವರ ವಿವಾಹದ ಮುನ್ನಾ ದಿನ ಅವರಿಗೆ 1,001 ಗಿಡಗಳನ್ನು ತಲುಪಿಸಲಾಗಿತ್ತು. ತನ್ನ ವಿವಾಹದ ಮೆರವಣಿಗೆ ವೇಳೆ ಬಿಸ್ವಾಲ್ ಈ ಗಿಡಗಳನ್ನು ಸಣ್ಣ ವ್ಯಾನಿನಲ್ಲಿ ಸಾಗಿಸಿದರು.

ಶಿಕ್ಷಕ ನಂತರ ಸುಮಾರು 700 ಗಿಡಗಳನ್ನುಗ್ರಾಮಸ್ಥರಿಗೆ ಶಂಖನಾದದ ನಡುವೆ ವಿತರಿಸಿದ್ದಾರೆ. ವಿವಾಹದ ಸಂದರ್ಭ ಯಾವುದೇ ಶಬ್ದ ಮಾಲಿನ್ಯ ಉಂಟಾಗದಿರಲಿ ಎಂಬ ಉದ್ದೇಶದಿಂದ ಡಿಜೆ ಸಂಗೀತ ಹಾಗೂ ಪಟಾಕಿಗಳನ್ನೂ ಮೆರವಣಿಗೆ ವೇಳೆ ಉಪಯೋಗಿಸಲಾಗಿಲ್ಲ.

ಬಿಸ್ವಾಲ್ ಅವರು 'ಗಚ್ಚಾತಿ ಪಾಯಿ ಸಾಥಿ ತಿಯೆ' (ಮರಕ್ಕೊಂದು ಗೆಳೆಯ) ಸಂಘಟನೆಯ ಸಂಚಾಲಕರಾಗಿದ್ದು, ಅವರು ಗಿಡಗಳನ್ನು ನೆಡುವ ಅಭಿಯಾನವನ್ನೂ ಹಮ್ಮಿಕೊಂಡಿದ್ದಾರೆ.

ಕಟಕ್ ನ ಕಮಲಾ ನೆಹರೂ ಬಾಲಕಿಯರ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿರುವ ಬಿಸ್ವಾಲ್ ಅವರ ಪತ್ನಿ ತನ್ನ ಪತಿಯ ಕಾರ್ಯದಿಂದ ಸಂತುಷ್ಟರಾಗಿದ್ದಾರೆ.

ತನಗೆ ವರದಕ್ಷಿಣೆಯಾಗಿ ದೊರೆತ 300 ಗಿಡಗಳನ್ನು ಅವರು ತಮ್ಮ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ವಿತರಿಸಿದ್ದಾರೆ. ಔತಣದ ಸಂದರ್ಭ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನೂ ಅವರು ಉಪಯೋಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News