ನಾನು ಬಜೆಟ್ ಮಂಡಿಸುತ್ತೇನೋ ಎಂಬುದು ಗೊತ್ತಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-06-25 12:37 GMT

ಬೆಂಗಳೂರು, ಜೂ. 25: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಬಜೆಟ್ ಮಂಡನೆ ಮಾಡಬೇಕೋ ಅಥವಾ ಬೇಡವೋ ಎಂಬ ಚರ್ಚೆ ನಡೆಯುತ್ತಿದೆ. ಲೋಕಸಭೆ ಚುನಾವಣೆ ನಂತರ ಹೊಸ ಬಜೆಟ್ ಮಂಡನೆ ಮಾಡಿ ಎನ್ನುತ್ತಿದ್ದಾರೆ. ಹೀಗಾಗಿ ನಾನು ಬಜೆಟ್ ಮಂಡಿಸುತ್ತೇನೆ ಇಲ್ಲವೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರಕಾರ ಮಂಡಿಸಿದ ಬಜೆಟ್ ಅನ್ನೇ ಮುಂದುವರೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹಿಂದಿನ ವಿಧಾನಸಭೆಗೆ ಆಯ್ಕೆಯಾಗಿದ್ದ ನೂರಕ್ಕೂ ಹೆಚ್ಚು ಶಾಸಕರು ಸೋತಿದ್ದಾರೆ. ಮತ್ತೆ ಅಷ್ಟೇ ಸಂಖ್ಯೆಯಲ್ಲಿ ನೂತನ ಶಾಸಕರೂ ಆಯ್ಕೆಗೊಂಡಿದ್ದಾರೆ. ಒಂದು ವೇಳೆ ಹಿಂದಿನ ಬಜೆಟ್ ಅನ್ನೇ ಮುಂದುವರೆಸಿದಲ್ಲಿ ಹೊಸದಾಗಿ ಆಯ್ಕೆಗೊಂಡ ಶಾಸಕರಿಂದ ತಾವು ಹಕ್ಕುಚ್ಯುತಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.

‘ಅಧಿಕಾರದಲ್ಲಿ ಎಷ್ಟು ದಿನಗಳ ಕಾಲ ಇರುತ್ತೇನೆ ಎಂಬುದು ನನಗೆ ಮುಖ್ಯವಲ್ಲ. ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೆ ಜನರಿಗಾಗಿ ಏನು ಮಾಡುತ್ತೇನೆ ಎಂಬುದು ನನಗೆ ಬಹಳ ಮುಖ್ಯ ಎಂದ ಕುಮಾರಸ್ವಾಮಿ, ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸುವುದು ನನ್ನ ಆದ್ಯತೆ ಎಂದು ಪ್ರಕಟಿಸಿದರು.

ಸಮನ್ವಯ ಸಭೆಯಲ್ಲಿ ಇತ್ಯರ್ಥ: ಹೊಸ ಬಜೆಟ್ ಮಂಡನೆ ಸಂಬಂಧ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇದೆಲ್ಲ ಮಾಧ್ಯಮಗಳ ಕಲ್ಪನೆ. ಈ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆ ಮಾಡುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಇತ್ಯರ್ಥ ಮಾಡಿಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ಬಜೆಟ್ ಬೇಡವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ತಪ್ಪು ಗ್ರಹಿಕೆ. ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಎಲ್ಲರ ಅಭಿಪ್ರಾಯಗಳು ಒಂದೇ ಆಗಿರಬೇಕು ಎಂದೇನಿಲ್ಲ ಎಂದ ಅವರು, ಸರಕಾರದ ವಿಚಾರಗಳ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

‘ಹಿಂದಿನ ವಿಧಾನಸಭೆಯಲ್ಲಿದ್ದ 100ಕ್ಕೂ ಹೆಚ್ಚು ಶಾಸಕರು ಸೋತಿದ್ದು, ಅಷ್ಟೇ ಸಂಖ್ಯೆಯ ನೂತನ ಶಾಸಕರೂ ಆಯ್ಕೆಯಾಗಿದ್ದಾರೆ. ಒಂದು ವೇಳೆ ಹಿಂದಿನ ಬಜೆಟ್ ಅನ್ನೇ ಮುಂದುವರೆಸಿದಲ್ಲಿ ಹೊಸದಾಗಿ ಆಯ್ಕೆಗೊಂಡ ಶಾಸಕರಿಂದ ತಾವು ಹಕ್ಕುಚ್ಯುತಿಗೆ ಒಳಗಾಗುವ ಸಾಧ್ಯತೆ ಇದೆ’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News