15 ನೆ ದಿನಕ್ಕೆ ಕಾಲಿಟ್ಟ ಧರಣಿ: ಸಾಮೂಹಿಕವಾಗಿ ಪರೀಕ್ಷೆ ಬಹಿಷ್ಕರಿಸಿದ ಕೃಷಿ ವಿವಿ ವಿದ್ಯಾರ್ಥಿಗಳು

Update: 2018-06-25 12:48 GMT

ಬೆಂಗಳೂರು, ಜೂ.25: ನಗರದ ಹೆಬ್ಬಾಳದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಖಾಸಗಿ ಕೃಷಿ ವಿವಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇಲ್ಲಿನ ಕೃಷಿ ವಿವಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ 15 ದಿನಕ್ಕೆ ಕಾಲಿಟ್ಟಿದೆ. ಸೋಮವಾರ 400 ಕ್ಕೂ ಅಧಿಕ ವಿದ್ಯಾರ್ಥಿಗಳು ಬಿಎಸ್ಸಿ ಕೃಷಿ ಕೋರ್ಸ್‌ನ ಜೆನೆಟಿಕ್ಸ್ ಅಂಡ್ ಪ್ಲಾಂಟ್ ಫೀಡಿಂಗ್, ಬಿಎಸ್ಸಿ ಕೃಷಿ ಮಾರುಕಟ್ಟೆಯ ಕೀಟಶಾಸ್ತ್ರ ಹಾಗು ಕೃಷಿ ತಾಂತ್ರಿಕತೆಯ ಥಿಯರಿ ಆಫ್ ಮಷಿನ್ಸ್ ಪರೀಕ್ಷೆಗಳನ್ನು ಸಾಮೂಹಿಕವಾಗಿ ಬಹಿಷ್ಕರಿಸಿ ವಿವಿ ಆವರಣರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶೈಕ್ಷಣಿಕ ವರ್ಷದ ಎಲ್ಲಾ ಪರೀಕ್ಷೆಗಳನ್ನು ಬರೆಯುವುದಿಲ್ಲ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು, ರಿಜಿಸ್ಟ್ರಾರ್ ಡಾ. ಎ.ಬಿ.ಪಾಟೀಲ್ ವಿರುದ್ಧ ಸಿಡಿದೆದ್ದಿದ್ದಾರೆ.

ಜೂ. 19 ರಂದು ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೂ, ಯಾವುದೆ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಮತ್ತೊಂದು ಕಡೆ ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಸರಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಧಾರವಾಡ ಕೃಷಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 5 ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಿದ್ದು, ಇವುಗಳ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸರಕಾರವೇ ಕೃಷಿ ಕಾಲೇಜುಗಳನ್ನು ತೆರೆಯಬೇಕೆಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಕೃಷಿ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರು ಪ್ರವೇಶಿಸಿದರೆ ರೈತರಿಗೆ ಅನಾನುಕೂಲವಾಗುವುದರಿಂದ ಕೃಷಿ ಶಿಕ್ಷಣವನ್ನು ಖಾಸಗೀಕರಣ ಮಾಡಬಾರದು. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಬೇಕು. ಆ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ರೈ ಟೆಕ್ ಕೃಷಿ ಕಾಲೇಜು ಸೇರಿ ಖಾಸಗಿ ಕೃಷಿ ಕಾಲೇಜುಗಳನ್ನು ಮುಚ್ಚಿಸಬೇಕು ಎಂದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News