ರೈತರ ಗೋಸಾಕಣೆಗೆ ಕಂಟಕವಾಗುತ್ತಿರುವ ಗೋರಕ್ಷಣೆ

Update: 2018-06-26 04:03 GMT

ಇತ್ತೀಚೆಗಷ್ಟೇ ರಾಜಸ್ಥಾನ ಸರಕಾರ ಗೋರಕ್ಷಣೆಗಾಗಿ ಸ್ಟಾಂಪ್ ಡ್ಯೂಟಿಯನ್ನು ಹೆಚ್ಚಿಸಿತು. ಇದೀಗ ಅದೇ ಸರಕಾರ ಗೋರಕ್ಷಣೆಯ ಹೆಸರಿನಲ್ಲಿ ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಹೊರಟಿದೆ. ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದರ ಕುರಿತಂತೆ ಯಾರ ಆಕ್ಷೇಪವೂ ಇರಲಾರದು. ಇದ್ದರೂ ಅದನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸುವ ಅಥವಾ ಅದಕ್ಕಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವ ಸಾಧ್ಯತೆಗಳು ಕಡಿಮೆ. ಇದೇ ಸಂದರ್ಭದಲ್ಲಿ ಸಂಗ್ರಹಿಸಿದ ಹಣದಿಂದ ಸರಕಾರ ಗೋವುಗಳನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡುತ್ತದೆ ಎನ್ನುವುದನ್ನು ಮಾತ್ರ ಈವರೆಗೆ ಬಹಿರಂಗಪಡಿಸಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಉತ್ತರ ಭಾರತದ ಹಲವು ರಾಜ್ಯಗಳು ಗೋರಕ್ಷಣೆಯ ಹೆಸರಿನಲ್ಲಿ ತೆರಿಗೆಗಳನ್ನು ಹಾಕುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಸರಕಾರ ಗೋರಕ್ಷಣೆಯ ಹೆಸರಿನಲ್ಲಿ ಜಾರಿಗೆ ತರಲು ಹೊರಟಿರುವ ಯೋಜನೆಗಳು ದೇಶದ ಅರ್ಥ ವ್ಯವಸ್ಥೆಗೆ ಯಾವ ರೀತಿಯಲ್ಲಿ ಪೂರಕವಾಗಿದೆ ಎನ್ನುವುದನ್ನು ಸರಕಾರ ಜನತೆಗೆ ಮನಗಾಣಿಸುವ ಅಗತ್ಯವಿದೆ.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಗೋವುಗಳನ್ನು ರಕ್ಷಿಸಲು ಸರಕಾರ ತೆರಿಗೆ ಸಂಗ್ರಹಿಸಲು ಮುಂದಾಗಿದೆ. ಹಾಗಾದರೆ ಇಲ್ಲಿಯವರೆಗೆ ಗೋವುಗಳಿಗೆ ರಕ್ಷಣೆ ಇರಲಿಲ್ಲವೇ? ಗೋವುಗಳ ಸಂಖ್ಯೆ ಆಪತ್ತಿನಲ್ಲಿದೆ ಎಂದು ಯಾವುದಾದರೂ ತಜ್ಞರು ಸರಕಾರಕ್ಕೆ ವರದಿ ನೀಡಿದ ಕುರಿತಂತೆ ಈವರೆಗೆ ಮಾಹಿತಿಯಿಲ್ಲ. ರೈತರು ಕೂಡ, ತಮ್ಮ ತಮ್ಮ ಗೋವುಗಳಿಗೆ ರಕ್ಷಣೆ ಬೇಕು ಎಂದು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಿಲ್ಲ. ಹೀಗಿದ್ದರೂ ಸರಕಾರವೇ ಸ್ವಯಂ ಆಸಕ್ತಿಯಿಂದ ಗೋರಕ್ಷಣೆಗೆ ಯಾಕೆ ಇಳಿದಿದೆ? ಇಷ್ಟಕ್ಕೂ ಗೋವುಗಳೆಂದರೆ ಕಾಡಿನಲ್ಲಿ ಅಳಿವಿನಂಚಿರುವ ಹುಲಿ, ಚಿರತೆಯಂತಹ ಪ್ರಾಣಿಗಳಲ್ಲ. ಅದು ಗ್ರಾಮೀಣ ಪ್ರದೇಶದಲ್ಲಿ ರೈತರ ಬದುಕಿನೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡ ಸಾಕು ಪ್ರಾಣಿ. ಈ ದೇಶದ ಇತಿಹಾಸವನ್ನು ಬಿಡಿಸಿ ನೋಡಿದರೆ ಇಲ್ಲಿ ಗೋಸಾಕಣೆ ಅಸ್ತಿತ್ವದಲ್ಲಿದೆಯೇ ಹೊರತು ಗೋರಕ್ಷಣೆಯಲ್ಲ. ಈ ದೇಶದಲ್ಲಿ ಗೋವುಗಳು ಉಳಿದು ಹೈನೋದ್ಯಮ ಅತ್ಯುತ್ತಮ ಸ್ಥಿತಿಯಲ್ಲಿರುವುದು ಗೋರಕ್ಷಕರಿಂದಲ್ಲ, ಗೋವುಗಳನ್ನು ಸಾಕುವವರಿಂದ.

ಉದ್ಯಮದ ಭಾಗವಾಗಿ ಇಲ್ಲಿ ರೈತರು ಗೋವುಗಳನ್ನು ಸಾಕುತ್ತಾರೆಯೇ ಹೊರತು, ಧಾರ್ಮಿಕ ಕಾರಣಗಳಿಗಾಗಿಯಲ್ಲ. ಎಲ್ಲಿಯವರೆಗೆ ಹೈನೋದ್ಯಮ ಲಾಭದಾಯಕವಾಗಿರುತ್ತದೆಯೋ ಅಲ್ಲಿಯವರೆಗೆ ಗೋಸಾಕಣೆಯನ್ನು ರೈತರು ಉತ್ಸಾಹದಿಂದ ಮುಂದುವರಿಸುತ್ತಾರೆ. ಗೋವುಗಳೂ ರೈತರು ಜೊತೆ ಜೊತೆಯಾಗಿ ಉಳಿಯುತ್ತಾರೆ, ಬೆಳೆಯುತ್ತಾರೆ. ಯಾವಾಗ ಹೈನೋದ್ಯಮ ಅಥವಾ ಗೋಸಾಕಣೆ ನಷ್ಟದ ವ್ಯವಹಾರವಾಗುತ್ತದೆಯೋ ಆಗ ಗೋಸಾಕಣೆಯನ್ನು ರೈತರು ನಿಲ್ಲಿಸುತ್ತಾರೆ. ಗೋವುಗಳ ಸಂಖ್ಯೆ ತನ್ನಷ್ಟಕ್ಕೆ ಇಳಿಮುಖವಾಗುತ್ತದೆ. ಅಂತಹ ಸಂದರ್ಭದಲ್ಲಿ ಗೋವುಗಳನ್ನು ಸಾಕುವ ರೈತರ ರಕ್ಷಣೆಗಾಗಿ ಸರಕಾರ ಧಾವಿಸಬೇಕಾಗುತ್ತದೆ. ಮುಖ್ಯವಾಗಿ ಹೈನೋದ್ಯಮ ನಷ್ಟದ ವ್ಯವಹಾರವಾಗದಂತೆ ನೋಡಿಕೊಳ್ಳುವುದು ಗೋರಕ್ಷಣೆಗಿರುವ ಒಂದೇ ದಾರಿ. ಸದ್ಯದ ಸ್ಥಿತಿಯಲ್ಲಿ ಗೋವುಗಳನ್ನು ಸಾಕುವ ರೈತರಿಗೆ ತಾವು ಸಾಕುತ್ತಿರುವ ಗೋವುಗಳೇ ಸಮಸ್ಯೆಯಾಗಿ ಪರಿಣಮಿಸಿವೆ. ಅದಕ್ಕೆ ಕಾರಣ ಗೋವುಗಳ ಕುರಿತಂತೆ ಸರಕಾರ ತಳೆದಿರುವ ರಾಜಕೀಯ ನಿಲುವು. ರೈತರಿಗೆ ಗೋವು ಆರ್ಥಿಕ ವಿಷಯವಾಗಿದ್ದರೆ, ಬಿಜೆಪಿ ನೇತೃತ್ವದ ಸರಕಾರಕ್ಕೆ ಗೋವುಗಳು ಭಾವನಾತ್ಮಕ ವಿಷಯವಾಗಿದೆ. ಸರಕಾರದ ಈ ನಿಲುವಿನಿಂದಾಗಿ ಗೋವುಗಳನ್ನು ಸಾಕುತ್ತಿರುವ ರೈತರು ಬಲಿಪಶುಗಳಾಗುತ್ತಿದ್ದಾರೆ. ಗೋವುಗಳು ರೈತರ ಸೊತ್ತು. ಅದನ್ನು ಯಾವಾಗ ಮಾರಬೇಕು, ಯಾರಿಗೆ ಮಾರಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕು ಅವನದೇ ಆಗಿದೆ.

ಯಾಕೆಂದರೆ ಆತ ಆ ಗೋವುಗಳಿಗಾಗಿ ಬಂಡವಾಳ ಹೂಡಿದ್ದಾನೆ. ಹೈನೋದ್ಯಮದ ಬೇರೆ ಬೇರೆ ಅಂಗಗಳು ಗೋಸಾಕಣೆಯನ್ನು ಪೊರೆಯುತ್ತಿವೆ. ಒಂದೆಡೆ ಹಾಲು, ತುಪ್ಪ, ಮೊಸರು ಇತ್ಯಾದಿ ಉತ್ಪಾದನೆಗಳಿಂದ ಆದಾಯ ಪಡಯಬಹುದಾಗಿದ್ದರೆ, ಮಗದೊಂದೆಡೆ ಅದರ ಗೊಬ್ಬರದ ಮೂಲಕವೂ ಆದಾಯ ಪಡೆಯಬಹುದು. ಇದೇ ಸಂದರ್ಭದಲ್ಲಿ ಹಟ್ಟಿಯಲ್ಲಿರುವ ಎಲ್ಲ ಗೋವುಗಳು ಹಾಲನ್ನು ಕೊಡಬೇಕು ಎಂದಿಲ್ಲ. ಹಾಗೆಯೇ, ಹಸುಗಳಷ್ಟೇ ಅಲ್ಲ, ಎತ್ತುಗಳೂ ಇರುತ್ತವೆ. ಈಗ ಗದ್ದೆಗಳನ್ನು ಉಳುವುದಕ್ಕೆ ಎತ್ತುಗಳನ್ನು ಬಳಸುವುದಿಲ್ಲ. ಈ ಅನುತ್ಪಾದಕ ಗೋವುಗಳನ್ನು ಸಾಕುವುದು ಲಾಭದಾಯಕವಲ್ಲ. ಸಾಧಾರಣವಾಗಿ ಇಂತಹ ಎತ್ತುಗಳನ್ನು ಅಥವಾ ಹಾಲು ಕೊಡದ ಹಸುಗಳನ್ನು ರೈತರು ಮಾರಾಟ ಮಾಡುತ್ತಾರೆ. ಇದರಿಂದ ಗೋವುಗಳನ್ನು ಸಾಕುವ ರೈತರಿಗೆ ಕೈ ತುಂಬಾ ಹಣ ಸಿಕ್ಕಿದಂತೆಯೂ ಆಗುತ್ತದೆ. ಹಾಗೆಯೇ ಆ ಹಣವನ್ನು ಬಳಸಿಕೊಂಡು ಹಟ್ಟಿಯಲ್ಲಿರುವ ಇತರ ಗೋವುಗಳಿಗೆ ಆಹಾರವನ್ನು ಒದಗಿಸುತ್ತಾರೆ. ಕಷ್ಟ ಕಾಲದಲ್ಲಿ ರೈತರು ತಮ್ಮ ಹಟ್ಟಿಯಲ್ಲಿರುವ ಇಂತಹ ಹಸುಗಳನ್ನು, ಎತ್ತುಗಳನ್ನು ಮಾರಿ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಾರೆ. ಇದರಿಂದಾಗಿ ಸಮಾಜಕ್ಕೆ ಇನ್ನೊಂದು ಲಾಭವಿದೆ. ಗೋಮಾಂಸ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಹಿಂದೆಲ್ಲ ಅತಿ ಕಡಿಮೆ ಬೆಲೆಗೆ ಗೋಮಾಂಸ ದೊರಕುತ್ತಿತ್ತು. ಬಡವರ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ಗೋಮಾಂಸವನ್ನೇ ಮಾಡುತ್ತಿದ್ದರು. ಸಮಾಜದ ಆಹಾರದ ಅಗತ್ಯವೂ ಈ ಹೈನೋದ್ಯಮದಿಂದ ಈಡೇರುತ್ತಿತ್ತು.

ಗೋಮಾಂಸ ಸೇವನೆಯಿಂದ ಗೋವುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಸರಕಾರದ ತರ್ಕವೇ ತಲೆ ಬುಡವಿಲ್ಲದ್ದು. ಯಾಕೆಂದರೆ ರೈತರು ಕಸಾಯಿಖಾನೆಗಾಗಿ ಹಸುಗಳನ್ನು ಸಾಕುವುದಿಲ್ಲ. ಸಾಕಣೆಯ ಸಂದರ್ಭದಲ್ಲಿ ಅನುಪಯುಕ್ತವಾದ ಗೋವುಗಳನ್ನಷ್ಟೇ ಮಾರಾಟ ಮಾಡುತ್ತಾರೆ. ಇದರಿಂದಾಗಿ ಗೋಸಾಕಣೆಯು ನಷ್ಟದಿಂದ ಪಾರಾಗುತ್ತದೆ. ಆದುದರಿಂದಲೇ ಗೋಮಾಂಸಾಹಾರಿಗಳು ಹೈನೋದ್ಯಮದ ಪ್ರಮುಖ ಭಾಗವಾಗಿದ್ದಾರೆ. ಅವರನ್ನು ಅದರಿಂದ ಹೊರಗಿಟ್ಟರೆ, ಹೈನೋದ್ಯಮ ಕೊಡುಕೊಳ್ಳುವಿಕೆಯ ಸರಪಣಿಯ ಬಹುದೊಡ್ಡ ಕೊಂಡಿಯೊಂದು ಕಳಚಿಕೊಂಡಂತೆ. ಗೋಹತ್ಯೆ ನಿಷೇಧದ ಮೂಲಕ ಸರಕಾರವೇ ಹೈನೋದ್ಯಮವನ್ನು ನಷ್ಟಕ್ಕೆ ದೂಡಲು ಹೊರಟಿದೆ. ಸದ್ಯಕ್ಕೆ ಗೋಸಾಕಣೆಯು ‘ಗೋರಕ್ಷಣೆ’ಯ ಪದವಾಗಿ ಬದಲಾಗುವುದಕ್ಕೆ ಯಾರು ಕಾರಣ? ಸರಕಾರವಿಂದು ಗೋರಕ್ಷಣೆಯ ಹೆಸರಿನಲ್ಲಿ ಹೈನೋದ್ಯಮವನ್ನು ಉದ್ಧರಿಸುವ ಅಥವಾ ಗೋವುಗಳನ್ನು ಸಾಕುವ ರೈತರನ್ನು ಉದ್ಧರಿಸುವ ಯೋಜನೆಗಳನ್ನು ರೂಪಿಸುವುದಕ್ಕೆ ಹೊರಟಿಲ್ಲ. ಬದಲಿಗೆ ರೈತರ ಹಟ್ಟಿಯಲ್ಲಿ ಅನುಪಯುಕ್ತವಾಗಿರುವ ಗೋವುಗಳಿಗಾಗಿ ಗೋಶಾಲೆಗಳನ್ನು ತೆರೆಯಲು ಮುಂದಾಗುತ್ತಿದೆ. ರೈತರು ತಮ್ಮ ಹಟ್ಟಿಯಲ್ಲಿದ್ದ ಗೋವುಗಳನ್ನು ಮಾರುವ ಬದಲಿಗೆ ಅನಿವಾರ್ಯವಾಗಿ ಈ ಗೋಶಾಲೆಗಳಿಗೆ ನೀಡಬೇಕಾಗುತ್ತದೆ. ಈ ಮೂಲಕ ತಮ್ಮ ಒಂದು ಆದಾಯದ ಮೂಲವನ್ನೇ ರೈತರು ಕಳೆದುಕೊಳ್ಳುತ್ತಾರೆ. ಇಷ್ಟಕ್ಕೂ ಗೋಶಾಲೆಗಳು ಎನ್ನುವುದೇ ಅಕ್ರಮಗಳ ಗೋಮಾಳ.

ಗೋರಕ್ಷಣೆಯ ಹೆಸರಲ್ಲಿ ಸಂಗ್ರಹಿಸಿದ ತೆರಿಗೆ ಹಣವೆಲ್ಲ ಗೋಶಾಲೆಗಳನ್ನು ತೆರೆಯುವ ಹೆಸರಿನಲ್ಲಿ ವಿವಿಧ ಸ್ವಾಮೀಜಿಗಳ, ರಾಜಕೀಯ ನಾಯಕರ ತಿಜೋರಿ ಸೇರುತ್ತವೆ. ಅಂತಿಮವಾಗಿ ಗೋಶಾಲೆಗಳಲ್ಲಿ ಆಹಾರವಿಲ್ಲದೆ ಗೋವುಗಳು ಸಾಯಬೇಕಾಗುತ್ತದೆ ಅಥವಾ ಗೋಶಾಲೆಗಳಿಂದ ಗೋವುಗಳು ಅಕ್ರಮವಾಗಿ ಬೃಹತ್ ಗೋಮಾಂಸ ಸಂಸ್ಕರಣಾ ಘಟಕಗಳಿಗೆ ರವಾನೆಯಾಗುತ್ತದೆ. ಗೋವುಗಳ ರಕ್ಷಣೆಗಾಗಿ ಅಂದರೆ ರೈತರು ಮಾರಾಟ ಮಾಡುವುದನ್ನು ತಡೆಯಲು ರೌಡಿಗಳು, ಗೂಂಡಾಗಳು ಈಗಾಗಲೇ ಪಡೆಗಳನ್ನು ಕಟ್ಟಿಕೊಂಡು ಗೋರಕ್ಷಣೆಯನ್ನು ದಂಧೆಯನ್ನಾಗಿಸಿದ್ದಾರೆ. ಗೋರಕ್ಷಣೆಯ ಹೆಸರಲ್ಲಿ ಇವೆರಲ್ಲರೂ ತೆರಿಗೆಯ ಹಣದಲ್ಲಿ ಈ ನಕಲಿ ಗೋರಕ್ಷಕರು ಮತ್ತು ಸರಕಾರದ ಕಾನೂನುಗಳಿಗೆ ಹೆದರಿ ಈಗಾಗಲೇ ರೈತರು ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೈನೋದ್ಯಮ ರೈತರ ಕೈ ಜಾರಲಿದೆ. ಜೊತೆಗೆ ಗೋರಕ್ಷಣೆಯ ಹೆಸರಲ್ಲಿ ಜನರಿಗೆ ತೆರಿಗೆ ವಿಧಿಸಿ ಆ ಹಣವನ್ನು ಕಂಡಕಂಡವರು ಗೋವಿನ ಹೆಸರಲ್ಲಿ ದೋಚಲಿದ್ದಾರೆ. ಗ್ರಾಮೀಣ ಅರ್ಥವ್ಯವಸ್ಥೆಯೇ ತಲೆಕೆಳಗಾಗಲಿವೆ. ನಿರುದ್ಯೋಗ ಹೆಚ್ಚಾಗಲಿದೆ. ಹಾಗೆಯೇ, ಮುಂದೊಂದು ದಿನ ಈ ದೇಶದಲ್ಲಿ ಪೂಜಿಸುವುದಕ್ಕಾಗಿಯೂ ಗೋವು ಉಳಿಯುವುದು ಅನುಮಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News