ಜಗತ್ತಿನಲ್ಲಿಯೇ ಮಹಿಳೆಯರಿಗೆ ಅಪಾಯಕಾರಿ ದೇಶ ಭಾರತ: ಥಾಮ್ಸನ್ ರೂಟರ್ಸ್ ಫೌಂಡೇಶನ್ ಸಮೀಕ್ಷೆ

Update: 2018-06-26 07:35 GMT

ಲಂಡನ್, ಜೂ.26: ಜಗತ್ತಿನಲ್ಲಿಯೇ ಭಾರತವು ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂದು ಥಾಮ್ಸನ್ ರೂಟರ್ಸ್ ಫೌಂಡೇಶನ್ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ. ಸುಮಾರು 550 ಮಂದಿ ಮಹಿಳಾ ತಜ್ಞರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ಪ್ರಕರಣಗಳಿಂದಾಗಿಯೇ ಭಾರತ ಮಹಿಳೆಯರಿಗೆ  ಅಪಾಯಕಾರಿ ದೇಶವಾಗಿ ಪರಿಣಮಿಸಿದೆ ಎಂದು ಸಮೀಕ್ಷೆ ತಿಳಿಸಿದೆ.

ಭಾರತದ ನಂತರದ ಎರಡು ಸ್ಥಾನಗಳು ಯುದ್ಧದಿಂದ ಕಂಗೆಟ್ಟಿರುವ ಅಫ್ಘಾನಿಸ್ತಾನ ಮತ್ತು ಸಿರಿಯಾಗೆ  ಹೋಗಿವೆ. ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಸೊಮಾಲಿಯಾ ಮತ್ತು ಸೌದಿ ಅರೇಬಿಯಾ ಪಡೆದಿವೆ. ಈ ಪಟ್ಟಿಯಲ್ಲಿನ ಪ್ರಥಮ ಹತ್ತು ದೇಶಗಳ ಪೈಕಿ ಮೂರನೇ ಸ್ಥಾನವನ್ನು ಅಮೆರಿಕಾ ಕೂಡಾ ಜಂಟಿಯಾಗಿ ಪಡೆದಿರುವುದು ಅಚ್ಚರಿ ಹುಟ್ಟಿಸಿದೆ. ಅಮೆರಿಕಾದಲ್ಲಿ ಲೈಂಗಿಕ ಶೋಷಣೆಯ ಅಪಾಯದ ಕುರಿತಾದ ಹಲವು ತಜ್ಞರ ಅಭಿಪ್ರಾಯದ ಆಧಾರದಲ್ಲಿ ಅಮೆರಿಕಾ ಕೂಡ ಮಹಿಳೆಯರಿಗೆ ಸಾಕಷ್ಟು ಅಪಾಯಕಾರಿ ದೇಶವೆಂದು ಪರಿಗಣಿಸಲ್ಪಟ್ಟಿದೆ.

2011ರಲ್ಲಿ ನಡೆಸಲಾದ ಇಂತಹುದೇ ಸಮೀಕ್ಷೆಯಲ್ಲಿ ಅಫ್ಘಾನಿಸ್ತಾನ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಪಾಕಿಸ್ತಾನ, ಭಾರತ ಮತ್ತು ಸೊಮಾಲಿಯಾ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿ ಗುರುತಿಸಲಟ್ಟಿದ್ದವು.

ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಅಪಾಯವನ್ನು ತಗ್ಗಿಸಲು ಸಾಕಷ್ಟು ಕ್ರಮ ಕೈಗೊಳ್ಳದೇ ಇರುವುದರಿಂದಲೇ  ಭಾರತ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಲು ಕಾರಣವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಪೂರಕ ಕ್ರಮಗಳಿಗೆ ಸಾಕಷ್ಟು ಮಹತ್ವ ನೀಡಲಾಗಿರುವ ಹೊರತಾಗಿಯೂ  ಹೆಚ್ಚಿನ ಬದಲಾವಣೆಯಾಗಿಲ್ಲ ಎಂಬುದನ್ನು  ಇದು ಸೂಚಿಸುತ್ತದೆ.

ವಿಶ್ವಸಂಸ್ಥೆಯ  193 ಸದಸ್ಯ ರಾಷ್ಟ್ರಗಳ ಪೈಕಿ ಐದು ರಾಷ್ಟ್ರಗಳಿಂದ ಆಯ್ದ ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಆರೋಗ್ಯ ಸೇವೆ, ಆರ್ಥಿಕ ಸಂಪನ್ಮೂಲಗಳು,  ಲೈಂಗಿಕ ಹಿಂಸೆ, ಕಿರುಕುಳ, ಲೈಂಗಿಕೇತರ ಹಿಂಸೆ ಹಾಗೂ ಮಾನವ ಕಳ್ಳಸಾಗಣಿಕೆಗೆ ಸಂಬಂಧಿಸಿದಂತೆ  ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಯಾವುದು ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

 ಮಾನವ ಕಳ್ಳಸಾಗಾಣಿಕೆ, ಲೈಂಗಿಕ ಗುಲಾಮಗಿರಿ,  ಕೌಟುಂಬಿಕ ಗುಲಾಮಗಿರಿ,  ಬಲವಂತದ ವಿವಾಹ ಹಾಗೂ ಹೆಣ್ಣು ಶಿಶು ಹತ್ಯೆ ವಿಚಾರಗಳಲ್ಲಿ ಭಾರತವು ಮಹಿಳೆಯರಿಗೆ ಅಪಾಯಕಾರಿ ಎಂದು  ಸಮೀಕ್ಷೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಭಾರತದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಸಮೀಕ್ಷಾ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News