ಮಾದಕ ವಸ್ತು ಸರಬರಾಜು ಜಾಲ ಪತ್ತೆ ಬಹುಮುಖ್ಯ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು

Update: 2018-06-26 13:52 GMT

ಬೆಂಗಳೂರು, ಜೂ.26: ಮಾದಕ ದ್ರವ್ಯ ಬಳಸುವವರನ್ನು ಹಿಡಿಯುವುದಕ್ಕಿಂತ, ಅದನ್ನು ಸರಬರಾಜು ಮಾಡುವ ಜಾಲಗಳನ್ನು ಪತ್ತೆ ಮಾಡುವುದು ಬಹುಮುಖ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಇಂದಿಲ್ಲಿ ಹೇಳಿದ್ದಾರೆ.

ಮಂಗಳವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಮಹಾನಿರ್ದೇಶಕರ ಪ್ರದಾನ ಕಚೇರಿಯಲ್ಲಿ ಮಾದಕ ವಸ್ತುಗಳ ವಿರೋಧಿ ಅಂತಾರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ನಡೆದ ಮಾದಕ ವಸ್ತು ಕಾನೂನು ಜಾರಿ ಕುರಿತ ಪೊಲೀಸರ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ದ್ರವ್ಯಗಳನ್ನು ಬಳಸುವವರಿಗಿಂತ, ಯುವಕರು ವಿದ್ಯಾರ್ಥಿ ದಿಸೆಯಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ದ್ರವ್ಯಗಳನ್ನು ಬಳಸುವವರನ್ನು ಹಿಡಿಯುವುದಕ್ಕಿಂತ, ಅದನ್ನು ಸರಬರಾಜು ಮಾಡುವ ಜಾಲಗಳನ್ನು ಪತ್ತೆ ಮಾಡುವುದು ಬಹುಮುಖ್ಯ. ಮಾದಕ ದ್ರವ್ಯಗಳನ್ನು ಪೂರೈಸುವವರ ಮೇಲೆ ಸೂಕ್ತ ನಿಗಾವಹಿಸಬೇಕು. ಎಂದು ತಿಳಿಸಿದರು.

ಇತ್ತಿಚೆಗೆ ಯುವ ಜನರೇ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಹೆಚ್ಚು ಬೆಳಕು ಚೆಲ್ಲಬೇಕು. ಇದು ಪ್ರತಿಯೊಬ್ಬ ಯುವಜನರಿಗೂ ತಲುಪುವಂತಾಗಬೇಕು. ಆಗ ಮಾತ್ರ ಈ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ ಎಂದು ನೀಲಮಣಿ ನುಡಿದರು.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಮಾತನಾಡಿ, ತಾಂತ್ರಿಕವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಪೊಲೀಸರು ತಮ್ಮ ತನಿಖಾ ವಿಧಾನವನ್ನು ಸುಧಾರಿಸಿಕೊಂಡು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದರು.

ಯಾವುದೇ ಪ್ರಕರಣದ ಆರೋಪದ ಮೇಲೆ ಬಂಧಿಸುವ ವ್ಯಕ್ತಿಗಳನ್ನು ಹೊಡಿ, ಬಡಿಯುವ ಮೂಲಕ ವಿಚಾರಣೆ ನಡೆಸುವ ಬದಲಾಗಿ ಅವರ ಮಾನಸಿಕ ಸ್ಥಿತಿಯನ್ನು ಅರ್ಥೈಸಿಕೊಂಡು ವಿಚಾರಣೆ ನಡೆಸಬೇಕು. ಇತ್ತೀಚೆಗೆ ಸಮಾಜದಲ್ಲಿ ಹಲವು ತಾಂತ್ರಿಕ ಬದಲಾವಣೆಯಾಗುತ್ತಿದ್ದು, ಪೊಲೀಸರು ಮನಃಶಾಸ್ತ್ರದ ಅಂಶಗಳು ಹಾಗೂ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ತನಿಖಾ ವಿಧಾನವನ್ನು ಸುಧಾರಿಸಿಕೊಂಡು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ಮಾಡಿದರು.

ಐಷಾರಾಮಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮೋಜಿಗಾಗಿ ಮಾದಕ ದ್ರವ್ಯಗಳಿಗೆ ಮಾರುಹೋಗುತ್ತಿದ್ದಾರೆ. ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ. ಪೊಲೀಸರಿಗೆ ಕಾನೂನು ಪ್ರಕ್ರಿಯೆ ಎಂಬುದು ಬಾಯಿ ಪಾಠವಾಗಬಾರದು. ಅದನ್ನು ತಮ್ಮ ಮನೋಭಾವನೆಯನ್ನಾಗಿ ಮೈಗೂಡಿಸಿಕೊಂಡು ಆತ್ಮಗೌರವದಿಂದ ಕರ್ತವ್ಯ ನಿರ್ವಹಿಸಬೇಕು. ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವ ಜನತೆಯನ್ನು ರಕ್ಷಿಸಲು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎ.ಎನ್.ಎಸ್.ಮೂರ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ದಿನೇ ದಿನೇ ಮಾದಕ ವ್ಯಸನದ ಪ್ರಕರಣಗಳು ಹೆಚ್ಚಾಗುತ್ತಿದ್ದು, 2015ರಿಂದ 2017ರವರೆಗೆ ಒಟ್ಟು 2132 ಮಾದಕ ವ್ಯಸನದ ಪ್ರಕರಣಗಳು ದಾಖಲಾಗಿವೆ.
 -ಎ.ಎನ್.ಎಸ್. ಮೂರ್ತಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News