ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್

Update: 2018-06-26 14:58 GMT

ಬೆಂಗಳೂರು, ಜೂ.26: ನಗರ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆಯದೆ ನಡೆಸುತ್ತಿರುವ ಲೈವ್‌ಬ್ಯಾಂಡ್‌ಗಳನ್ನು ಮುಚ್ಚುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸಿರುವ ವಿಚಾರ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮಂಗಳವಾರ ನೋಟಿಸ್ ನೀಡಿದೆ.

ಪರವಾನಗಿ ಹೊಂದಿರದ ಹಿನ್ನೆಲೆಯಲ್ಲಿ ವಹಿವಾಟು ನಿಲ್ಲಿಸುವಂತೆ ಸೂಚಿಸಿ ಲೈವ್‌ಬಾಂಡ್ ನಡೆಸುತ್ತಿರುವ ನಗರದ ನರಸಿಂಹರಾಜ ರಸ್ತೆಯ ಮೆರ್ಸ್‌ಸ್ ಲವರ್ಸ್ ನೈಟ್ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಕೆ.ಜಿ.ರಸ್ತೆಯ ಕೋಸ್ಟರಿಕಾ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ರೆಸಿಡೆನ್ಸಿ ರಸ್ತೆಯ ನರ್ತಕಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ನೋಟಿಸ್ ಜಾರಿಗೊಳಿಸಲಾಗಿತ್ತು

ಈ ನೋಟಿಸ್ ಪ್ರಶ್ನಿಸಿ ಆಯಾ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದವು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ಏಕಸದಸ್ಯ ನ್ಯಾಯಪೀಠ, ನಗರ ಪೊಲೀಸ್ ಆಯುಕ್ತರು ಮತ್ತು ಕಲಾಸಿಪಾಳ್ಯ, ಎ.ಜೆ.ಪಾರ್ಕ್ ಮತ್ತು ಅಶೋಕ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ಬುಧವಾರಕ್ಕೆ ವಿಚಾರಣೆ ಮುಂದೂಡಿತು.

ಲೈವ್‌ಬ್ಯಾಂಡ್ ನಡೆಸಲು ಆಯಾ ಬಾರ್ ಅಂಡ್ ರೆಸ್ಟೋರೆಂಟ್‌ನವರು ಸಾರ್ವಜನಿಕ ಸ್ಥಳಗಳಲ್ಲಿ ಮನೋರಂಜನೆ ನಡೆಸುವ ಚಟುವಟಿಕೆಗಳ ಪರವಾನಿಗೆ ಹಾಗೂ ನಿಯಂತ್ರಣ (ಬೆಂಗಳೂರು ನಗರ) ನಿಯಮಗಳನ್ವಯ ಸಂಬಂಧಪಟ್ಟ ಪೊಲೀಸ್ ಆಯುಕ್ತರಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಹಾಗೆಯೇ, ಲೈವ್‌ಬಾಂಡ್ ನಡೆಯುತ್ತಿರುವ ಕಟ್ಟಡವು ಸ್ವಾಧೀನಾನುಭವ ಪತ್ರ ಹೊಂದಿರಬೇಕು. ಪರವಾನಿಗೆ ಹೊಂದಿರದ ಲೈವ್ ಬಾಂಡ್‌ಗಳನ್ನು ಪೊಲೀಸ್ ಆಯುಕ್ತರು ಮುಚ್ಚಿಸಬೇಕು ಎಂದು ನಿರ್ದೇಶಿಸಿ ಸುಪ್ರೀಂ ಕೋರ್ಟ್ ಇದೇ ಜ.25ರಂದು ಆದೇಶ ಹೊರಡಿಸಿತ್ತು.

ಇದರನ್ವಯ ಪರವಾನಿಗೆ ಹಾಗೂ ಸ್ವಾಧೀನಾನುಭವ ಪತ್ರ ಹೊಂದಿರದ ನಗರದ 170ಕ್ಕೂ ಹೆಚ್ಚು ಲೈವ್ ಬ್ಯಾಂಡ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದ ಪೊಲೀಸ್ ಆಯುಕ್ತರು, ವಹಿವಾಟು ಸ್ಥಗಿತಗೊಳಿಸಬೇಕು ಎಂದು ನಿರ್ದೇಶಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News