ಐಎನ್‌ಎಕ್ಸ್ ಮೀಡಿಯಾ ಹಗರಣ: ಕಾರ್ತಿಗೆ ಜಾಮೀನು ನೀಡಿಕೆ ವಿರುದ್ಧ ಸಿಬಿಐ ಮೇಲ್ಮನವಿ

Update: 2018-06-26 15:03 GMT

ಹೊಸದಿಲ್ಲಿ,ಜೂ.26: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿರುವ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.

ಜಾಮೀನು ಕೋರಿ ಕಾರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿಯಿರುವಾಗ ಅಂತಹುದೇ ಅರ್ಜಿಯನ್ನು ಉಚ್ಚ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದ್ದು ಅನುಜ್ಞಾರ್ಹವಾಗಿರಲಿಲ್ಲ ಎಂದು ಸಿಬಿಐ ತನ್ನ ಮೇಲ್ಮನವಿಯಲ್ಲಿ ವಾದಿಸಿದೆ.

ಮಾ.23ರಂದು ದಿಲ್ಲಿ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶರ ಪೀಠವು ಕಾರ್ತಿಗೆ ಜಾಮೀನು ಮಂಜೂರು ಮಾಡಿತ್ತು.

ಕಳೆದ ವರ್ಷದ ಮೇ 15ರಂದು ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಸಿಬಿಐ ಕಾರ್ತಿಯನ್ನು ಈ ವರ್ಷದ ಫೆ.28ರಂದು ಬಂಧಿಸಿತ್ತು.

2007ರಲ್ಲಿ ಪಿ.ಚಿದಂಬರಂ ಅವರು ಕೇಂದ್ರ ವಿತ್ತಸಚಿವರಾಗಿದ್ದಾಗ ವಿದೇಶಗಳಿಂದ 305 ಕೋ.ರೂ.ಗಳನ್ನು ಸ್ವೀಕರಿಸಲು ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು ನೀಡಿದ್ದ ಅನುಮತಿಯಲ್ಲಿ ಅವ್ಯವಹಾರಗಳು ನಡೆದಿದ್ದು,ಇದರಲ್ಲಿ ಕಾರ್ತಿ ಚಿದಂಬರಂ ಶಾಮೀಲಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕಾರ್ತಿ ಒಂದು ಮಿಲಿಯ ಡಾ.ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News