ಅಳಿವಿನಂಚಿನ ಕಲೆಗಳ ಉಳಿಸಲು ಸರಕಾರ ಮುಂದಾಗಬೇಕು: ನಾಡೋಜ ಬೆಳಗಲ್ಲು ವೀರಣ್ಣ

Update: 2018-06-26 16:35 GMT

ಬೆಂಗಳೂರು, ಜೂ.26: ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸಲು ಸರಕಾರ ಮುಂದಾಗಬೇಕು ಎಂದು ತೊಗಲುಗೊಂಬೆ ಯಕ್ಷಗಾನ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮನವಿ ಮಾಡಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಳಿವಿನಂಚಿನಲ್ಲಿರುವ ಕಲಾ ಪ್ರಕಾರಗಳಾದ ಬಯಲಾಟ, ಸಣ್ಣಾಟ, ದೊಡ್ಡಾಟದಂತಹ ಕಲೆಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಎರಡು ದಶಕಗಳ ಹಿಂದೆ ಗ್ರಾಮೀಣ ಭಾಗದ ಜನರನ್ನು ರಂಜಿಸುತ್ತಿದ್ದ ಗ್ರಾಮೀಣ ಕಲೆಗಳು ಇಂದು ಅಳವಿನಂಚಿನಲ್ಲಿವೆ. ಅಂತಹ ಕಲಾಪ್ರಕಾರಗಳಲ್ಲಿ ತೊಡಗಿಕೊಂಡಿರುವ ಸಾವಿರಾರು ಕಲಾವಿದರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ಕಲೆಗಳನ್ನು ಉಳಿಸಿ ಸಂಕಷ್ಟದಲ್ಲಿರುವ ಕಲಾವಿದರನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಸರಕಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ರಂಗಭೂಮಿ ವೃತ್ತಿಯೂ ಒಂದು ಜ್ಞಾನವಿದ್ದಂತೆ, ಹೆಚ್ಚು ಅಧ್ಯಯನ ಮಾಡಿದಷ್ಟು ಬೆಳೆಯಲು ಅವಕಾಶವಿದೆ. ಹಾಗಾಗಿ ಕಲಾವಿದರು ಅದನ್ನು ಪೋಷಿಸಿ ಬೆಳೆಸಲು ಶ್ರಮಿಸಬೇಕು. ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಬಾರದು ಎಂದು ಸಲಹೆ ನೀಡಿದರು.

ತನ್ನ ಒಂಬತ್ತನೇ ವಯಸ್ಸಿನಲ್ಲಿ ಪೋಷಕರನ್ನು ಕಳೆದುಕೊಂಡಿದ್ದೆ. ಹತ್ತನೇ ವಯಸ್ಸಿನಿಂದ ವಿವಿಧ ಬೀದಿ ನಾಟಕ, ಬಯಲಾಟ ಸೇರಿದಂತೆ ಹಲವು ರಂಗ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಇಡೀ ಜೀವನವನ್ನೇ ನಾಟಕಗಳಿಗಾಗಿ ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News