"ನಿಮಗೆ ಭದ್ರತೆ ಅಗತ್ಯವಿಲ್ಲ, ನೀವು ನಮ್ಮ ಅತಿಥಿಗಳು"

Update: 2018-06-27 05:53 GMT

ಶ್ರೀನಗರ, ಜೂ.27: ವಾರ್ಷಿಕ ಅಮರನಾಥ್ ಯಾತ್ರೆ ಆರಂಭಗೊಳ್ಳುವ ಎರಡು ದಿನಗಳ ಮುನ್ನ ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದೀನ್  ಧ್ವನಿಮುದ್ರಿಕೆ ಸಂದೇಶವೊಂದನ್ನು ಬಿಡುಗಡೆಗೊಳಿಸಿ, "ತೀರ್ಥಯಾತ್ರಿಗಳ ಮೇಲೆ ದಾಳಿಗೈಯ್ಯುವ ಯಾವುದೇ ಉದ್ದೇಶ ತನಗಿಲ್ಲ" ಎಂದು ಹೇಳಿದೆ.

ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ರಿಯಾಝ್ ಅಹ್ಮದ್ ನೈಕೂ ಧ್ವನಿಯೆಂದು ಹೇಳಲಾದ ಧ್ವನಿಮುದ್ರಿಕೆ ಸಂದೇಶದಲ್ಲಿ ಆತ, ಈ ಬಾರಿ ತೀರ್ಥಯಾತ್ರಿಗಳು ಯಾವುದೇ ಭದ್ರತಾ ವ್ಯವಸ್ಥೆಯಿಲ್ಲದೆಯೇ ಯಾತ್ರೆ ಕೈಗೊಳ್ಳಬಹುದೆಂದು ಹೇಳಿದ್ದಾನೆ. "ನೀವು ನಮ್ಮ ಅತಿಥಿಗಳಾಗಿರುವುದರಿಂದ ನಿಮಗೆ ಯಾವುದೇ ಭದ್ರತೆಯ ಅಗತ್ಯವಿಲ್ಲ'' ಎಂದು 15 ನಿಮಿಷದ ಧ್ವನಿಮುದ್ರಿಕೆಯಲ್ಲಿ  ಹೇಳಲಾಗಿದೆ. ಈ ಧ್ವನಿಮುದ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಹರಿದಾಡುತ್ತಿದೆ.

ಕಾಶ್ಮೀರ ಕಣಿವೆಯಿಂದ 1990ರ ದಶಕದಲ್ಲಿ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಮರಳಿ ಬರಬಹುದು ಎಂದು ಹೇಳಿದ ಆತ ಅದೇ ಸಮಯ ಅವರಿಗೆ ಪ್ರತ್ಯೇಕ ಕಾಲನಿಗಳನ್ನು ನಿರ್ಮಿಸುವುದನ್ನು  ವಿರೋಧಿಸಿದ್ದಾನೆ.

"ಇತ್ತೀಚೆಗೆ ಜಮ್ಮು ಕಾಶ್ಮೀರದ ಡಿಜಿಪಿ ಎಸ್‍ಪಿ ವೈದ್ ಹೇಳಿಕೆ ನೀಡಿ ಉಗ್ರರು ಯಾತ್ರೆಯ ಮೇಲೆ ದಾಳಿ ನಡೆಸಲು ಸಂಚು ಹೂಡುತ್ತಿರುವುದರಿಂದ  ಅಮರನಾಥ್ ಯಾತ್ರೆಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದರು. ಇದು ನಿಜವಲ್ಲ. ನಮಗೆ ಅಂತಹ ಯಾವುದೇ ಉದ್ದೇಶವಿಲ್ಲ,'' ಎಂದು  ಸಂದೇಶ ಹೇಳಿದೆ.

"ಅವರು (ಯಾತ್ರಿಗಳು) ತಮ್ಮ ಧಾರ್ಮಿಕ  ಕರ್ತವ್ಯಗಳನ್ನು ಈಡೇರಿಸಲು ಬರುತ್ತಿದ್ದಾರೆ. ನಾವು ಈ ಹಿಂದೆ ಅಮರನಾಥ ಯಾತ್ರೆಯ ಮೇಲೆ ಯಾವತ್ತೂ ದಾಳಿ ನಡೆಸಿಲ್ಲ ಏಕೆಂದರೆ ನಮ್ಮ ಹೋರಾಟ ಯಾತ್ರಿಗಳ ವಿರುದ್ಧವಲ್ಲ. ನಮ್ಮ ಜನರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಹಾಗೂ ನಾವು ಬಂದೂಕನ್ನು ಕೈಗೆತ್ತಿಕೊಳ್ಳುವಂತೆ ಮಾಡಿದವರ ವಿರುದ್ಧ ನಮ್ಮ ಹೋರಾಟ,'' ಎಂದು ಸಂದೇಶ ಹೇಳಿದೆ.

ವಾರ್ಷಿಕ ಅಮರನಾಥ ಯಾತ್ರೆ ದಕ್ಷಿಣ ಕಾಶ್ಮೀರದ ಪಹಲ್ಗಂ ಹಾಗೂ ಮಧ್ಯ ಕಾಶ್ಮೀರದ ಬಲ್ತಲ್ ನಿಂದ  ಬಿಗಿ ಭದ್ರತೆಯೊಂದಿಗೆ ಗುರುವಾರ ಆರಂಭಗೊಳ್ಳಲಿದೆ. ಕಳೆದ ವರ್ಷ ಉಗ್ರರು ಅನಂತನಾಗ್ ಪಟ್ಟಣದಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ನಡೆಸಿದ ದಾಳಿಯಲ್ಲಿ ಎಂಟು ಯಾತ್ರಿಗಳು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News