ಒಂದು ತಿಂಗಳಿನಿಂದ ಉದ್ಯೋಗವಿಲ್ಲವೇ?: ಹಾಗಾದರೆ ಪಿಎಫ್ ಖಾತೆ ಹೊಂದಿರುವವರಿಗೆ ಸಂತೋಷದ ಸುದ್ದಿ ಇದು

Update: 2018-06-27 09:38 GMT

ಹೊಸದಿಲ್ಲಿ, ಜೂ.27: ಸದಸ್ಯರು  ಒಂದು ತಿಂಗಳಿಗಿಂತ ಹೆಚ್ಚು ಸಮಯ ನಿರುದ್ಯೋಗಿಗಳಾಗಿದ್ದಲ್ಲಿ ಪ್ರಾವಿಡೆಂಟ್ ಫಂಡ್ ಖಾತೆಯಲ್ಲಿರುವ ಒಟ್ಟು ಮೊತ್ತದಲ್ಲಿ ಶೇ 75ರಷ್ಟು ಹಣವನ್ನು ಹಿಂದಕ್ಕೆ ಪಡೆಯಬಹುದೆಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‍ಒ)  ಹೇಳಿದೆ.

ಈಗಿನ ನಿಯಮಗಳ ಪ್ರಕಾರ  ಸದಸ್ಯರು ಎರಡು ತಿಂಗಳುಗಳ ಕಾಲ ಉದ್ಯೋಗ ಹೊಂದಿರದೇ ಇದ್ದ ಪಕ್ಷದಲ್ಲಿ ಮಾತ್ರ ಅವರು ತಮ್ಮ ಸಂಪೂರ್ಣ ಪಿಎಫ್ ಮೊತ್ತವನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಹೊಸ ನಿಯಮ ಜಾರಿಗೆ ಬಂದರೂ ಈಗಿನ ನಿಯಮ ಊರ್ಜಿತದಲ್ಲಿರುತ್ತದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗ್ಯಾಂಗ್ವಾರ್ ಅವರ ನೇತೃತ್ವದಲ್ಲಿ ನಡೆದ ಇಪಿಎಫ್‍ಒ ಕೇಂದ್ರ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಮಿಕ ನಿಧಿಯ 5 ಕೋಟಿ ಸದಸ್ಯರು ತಮ್ಮ ಪಿಎಫ್ ಬ್ಯಾಲೆನ್ಸ್ ಹಣವನ್ನು ಮನೆ ಖರೀದಿ/ನಿರ್ಮಾಣಕ್ಕೆ, ಸಾಲ ಮರುಪಾವತಿಗೆ, ಸ್ವಂತ ಅಥವಾ ಮಕ್ಕಳ ವಿವಾಹಕ್ಕೆ, ಕುಟುಂಬ ಸದಸ್ಯರ  ಚಿಕಿತ್ಸೆಗೆ ಕೂಡ ಹಿಂದಕ್ಕೆ ಪಡೆಯಬಹುದಾಗಿದೆ. ಆದರೆ ಪ್ರತಿಯೊಂದು ಉದ್ದೇಶಕ್ಕಾಗಿ ಎಷ್ಟು ಹಣ ವಾಪಸ್  ಪಡೆಯಬಹುದೆಂಬುದು ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಉದಾಹರಣೆಗೆ ವಿವಾಹದ ಉದ್ದೇಶಕ್ಕೆ ಉದ್ಯೋಗಿಯೊಬ್ಬ ಶೇ 50ರಷ್ಟು ಪಿಎಫ್ ಹಣ ವಾಪಸ್ ಪಡೆಯಬಹುದಾಗಿದೆ. ಆದರೆ  ಆತನ ಉದ್ಯೋಗದಾತ ಕನಿಷ್ಠ ಏಳು ವರ್ಷಗಳ ತನಕ ತನ್ನ ಪಾಲಿನ ಪಿಎಫ್ ಹಣ ಪಾವತಿಸುತ್ತಿದ್ದಿರಬೇಕು ಎಂದು ನಿಯಮ ತಿಳಿಸುತ್ತದೆ.

 ಈ ವರ್ಷ ಪಿಎಫ್ ಬಡ್ಡಿ ದರ ಇತ್ತೀಚಿಗಿನ ವರ್ಷಗಳಲ್ಲಿಯೇ ಕನಿಷ್ಠ ಅಂದರೆ ಶೇ.8.55 ಆಗಿತ್ತು. 2016-17ರಲ್ಲಿ ಈ ಬಡ್ಡಿ ದರ ಶೇ. 8.65 ಆಗಿದ್ದರೆ ಅದಕ್ಕಿಂತಲೂ ಹಿಂದಿನ ಎರಡು ವರ್ಷಗಳಲ್ಲಿ ಅದು ಕ್ರಮವಾಗಿ ಶೇ 8.8 ಹಾಗೂ ಶೇ 8.75 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News