ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ: ಸಚಿವ ಆರ್.ವಿ.ದೇಶಪಾಂಡೆ

Update: 2018-06-27 13:15 GMT

ಬೆಂಗಳೂರು, ಜೂ.27: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಕ್ಷೇತ್ರಾಭಿವೃದ್ಧಿ ಕಾಯ್ದೆ-2018 ಕೆಂಪೇಗೌಡರ ಜಯಂತಿಯ ದಿನವಾದ ಜೂ.27ರಿಂದ ಜಾರಿಗೆ ಬಂದಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸಂಸ್ಥಾಪಕರಾದ ಕೆಂಪೇಗೌಡರಿಗೆ ಸಂಬಂಧಿಸಿದ ಪರಂಪರೆಯ ತಾಣಗಳು, ಸ್ಮಾರಕಗಳು ಮತ್ತು ಪ್ರವಾಸ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯು ಈ ಕಾಯ್ದೆಯಿಂದ ಸಾಧ್ಯವಾಗಲಿದೆ. ಆ ಮೂಲಕ ಬೆಂಗಳೂರು ನಿರ್ಮಾರ್ತೃವಿಗೆ ರಾಜ್ಯ ಸರಕಾರ ಕೊಡುತ್ತಿರುವ ಗೌರವ ಇದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರನ್ನು ಅಭಿವೃದ್ಧಿಪಡಿಸಲು ಕೆಂಪೇಗೌಡರು ಕೈಗೊಂಡ ಕ್ರಮಗಳನ್ನು ಗುರುತಿಸಿ, ಅವರಿಗೆ ಸಂಬಂಧಿಸಿದ ಪ್ರತಿಯೊಂದು ತಾಣ ಮತ್ತು ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಇದಕ್ಕಾಗಿ ಪ್ರಾಧಿಕಾರವು ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಅವರು ವಿವರಿಸಿದರು.

ಕೆಂಪೇಗೌಡರಿಗೆ ಸಂಬಂಧಿಸಿದ ಸ್ಥಳಗಳು ಮತ್ತು ಸ್ಮಾರಕಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯಲ್ಲಿವೆ. ಇವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಆಕರ್ಷಿಸುವಂತಹ ಪರಂಪರೆ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ನುಡಿದಿದ್ದಾರೆ.

ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುವ ಈ ಪ್ರಾಧಿಕಾರಕ್ಕೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಉಳಿದಂತೆ ಕಂದಾಯ ಸಚಿವರು ಮತ್ತು ಕನ್ನಡ-ಸಂಸ್ಕೃತಿ ಸಚಿವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು, ಬೆಂಗಳೂರು ನಗರದ ರಾಜ್ಯಸಭಾ ಸದಸ್ಯರು, ಯಲಹಂಕ ಮತ್ತು ಮಾಗಡಿ ಶಾಸಕರು, ಬಿಬಿಎಂಪಿ ಮೇಯರ್, ಕಂದಾಯ, ಹಣಕಾಸು ಇಲಾಖೆ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಗಳ ಹೆಚ್ಚುವರಿ ಅಪರ ಮುಖ್ಯ ಕಾರ್ಯದರ್ಶಿಗಳು ಅಥವಾ ಪ್ರಧಾನ ಕಾರ್ಯದರ್ಶಿಗಳು ಅಥವಾ ಕಾರ್ಯದರ್ಶಿಗಳು, ಮತ್ತು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ ಎಂದು ದೇಶಪಾಂಡೆ ಮಾಹಿತಿ ನೀಡಿದ್ದಾರೆ.

ಕೆಂಪೇಗೌಡರ ಇತಿಹಾಸ ಮತ್ತು ಪರಂಪರೆಯ ಬಗ್ಗೆ ವಿದ್ವತ್ತನ್ನುಳ್ಳ ಆರು ಪರಿಣತರನ್ನು ಈ ಪ್ರಾಧಿಕಾರಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ನಾಮಕರಣ ಮಾಡಲಾಗುವುದು.
-ಆರ್.ವಿ.ದೇಶಪಾಂಡೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News