ಉನ್ನತ ಹುದ್ದೆಗಳಿಗೆ ಖಾಸಗಿ ಪರಿಣಿತರ ನೇಮಕ ಸರಿಯಲ್ಲ

Update: 2018-06-28 06:18 GMT

ಖಾಸಗೀಕರಣ ಮತ್ತು ಕೇಸರೀಕರಣಗಳ ಗೀಳು ಅಂಟಿಸಿಕೊಂಡಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (ಎನ್‌ಡಿಎ) ಸರಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣಿತರು ಹಾಗೂ ತಜ್ಞರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಕೃಷಿ, ಆರ್ಥಿಕ ವ್ಯವಹಾರ ಮತ್ತು ಮೂಲ ಸೌಕರ್ಯಗಳಂತಹ ವಿವಿಧ ವಲಯಗಳಲ್ಲಿ 10 ಜಂಟಿ ಕಾರ್ಯದರ್ಶಿಗಳ ಹುದ್ದೆಗಳ ನೇಮಕಾತಿಗೆ ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲು ಅರ್ಜಿ ಕರೆಯಲಾಗಿದೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆೆ.

ಜೂನ್ 10ರಂದು ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪತ್ರಿಕೆಗಳ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ 40 ವರ್ಷ ದಾಟಿದ ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ 15 ವರ್ಷ ಅನುಭವವಿರುವ ಖಾಸಗಿ ಕಂಪೆನಿಗಳಲ್ಲಿ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರಕಾರದ ಈ ಕ್ರಮವನ್ನು ದೇಶದ ಕಾರ್ಪೊರೇಟ್ ವಲಯ ಸ್ವಾಗತಿಸಿದೆ. ಅಧಿಕಾರಶಾಹಿಯ ಬಿಗಿಮುಷ್ಟಿಯನ್ನು ಸಡಿಲಿಸುವ ಕ್ರಮ ಇದಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಸಾರ್ವಜನಿಕ ಆಡಳಿತಕ್ಕೆ ಖಾಸಗಿ ವಲಯದಿಂದ ನೇರ ನೇಮಕ ಮಾಡಿಕೊಳ್ಳುವ ಕ್ರಮ ಹೊಸದೇನೂ ಅಲ್ಲ. 1965ರಲ್ಲಿ ಮೊದಲ ಆಡಳಿತ ಸುಧಾರಣಾ ಆಯೋಗ ಈ ರೀತಿ ನೇಮಕ ಮಾಡಲು ಶಿಫಾರಸು ಮಾಡಿತ್ತು. ಆದರೆ, ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. ಮೊಂಟೆಕ್ ಸಿಂಗ್ ಅಹ್ಲುವಾಲಿಯ, ವಿಜಯ ಕೇಳ್ಕ್ಕರ್, ಅರವಿಂದ್ ಸುಬ್ರಹ್ಮಣ್ಯ ಅವರಂತಹ ಕೆಲವು ವ್ಯಕ್ತಿಗಳನ್ನು ಮಾತ್ರ ಅಪರೂಪಕ್ಕೆ ನೇಮಕ ಮಾಡಿಕೊಳ್ಳಲಾಯಿತು. ಇಂತಹ ಕ್ರಮಗಳಿಂದ ಸರಕಾರದ ಆಡಳಿತ ನಿರ್ವಹಣೆ ಕಾರ್ಯ ಸುಧಾರಿಸುತ್ತದೆ ಎಂಬ ಸಮರ್ಥನೆ ಕೇಳಿ ಬರುತ್ತಿದೆ. ಉದಾರೀಕರಣದ ವೇಗಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲು ಈಗಿನ ಕಾರ್ಯಾಂಗದಿಂದ ಸಾಧ್ಯವಿಲ್ಲ ಎಂಬ ಸಮರ್ಥನೆೆಯ ಹಿನ್ನೆಲೆಯಲ್ಲಿ ಈ ನೇಮಕಗಳಿಗೆ ಅರ್ಜಿ ಕರೆಯಲಾಗಿದೆ.

ಕೇಂದ್ರ ಸರಕಾರದ ನೀತಿ ನಿರೂಪಣೆಯಲ್ಲಿ ಸಂಘಪರಿವಾರದ ನೇರ ಹಸ್ತಕ್ಷೇಪದ ಬಗ್ಗೆ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಾಗ ನರೇಂದ್ರ ಮೋದಿ ಸರಕಾರ ರಾಜಕೀಯ ವಲಯದಿಂದ ಪರಿಣಿತರ ನೇಮಕಾತಿಯನ್ನು ಮಾಡಿಕೊಳ್ಳಲು ಮುಂದಾಗಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಸರಕಾರದ ಕ್ರಮವನ್ನು ಖಂಡಿಸಿವೆ. ಆದರೆ ಪ್ರತಿಪಕ್ಷಗಳದ್ದು ಬರೀ ಕಾಟಾಚಾರದ ವಿರೋಧವಾಗಿದೆ. ಒಂದು ವ್ಯವಸ್ಥಿತವಾದ ಪ್ರತಿರೋಧ ಇದಕ್ಕೆ ಕಂಡುಬರುತ್ತಿಲ್ಲ ಎಂಬುದು ಆತಂಕದ ಸಂಗತಿಯಾಗಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಗೊಂದಲ ಮೂಡಿದೆ. ಖಾಸಗಿ ವಲಯದಿಂದ ಪರಿಣಿತರ ನೇಮಕಾತಿ ಕುರಿತ ಪ್ರಕಟನೆಗೆ ಸರಕಾರ ನೀಡುತ್ತಿರುವ ಕುಂಟು ನೆಪವೆಂದರೆ ಈಗ ಆಡಳಿತಾಂಗದಲ್ಲಿ ದಕ್ಷ ಅಧಿಕಾರವರ್ಗವಿಲ್ಲ. ಅದಕ್ಕಾಗಿ ಖಾಸಗಿ ವಲಯದಿಂದ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಮಾತಿನಲ್ಲಿ ಕೊಂಚ ಸತ್ಯಾಂಶ ಇರಬಹುದಾದರೂ ಇದೇ ನಿಜವಾದ ಕಾರಣವಲ್ಲ. ಖಾಸಗಿ ವಲಯದ ಪರಿಣಿತರೆಲ್ಲ ದಕ್ಷತೆಗೆ ಹೆಸರಾದವರು ಎಂದು ಹೇಳಲು ಸಾಧ್ಯವಿಲ್ಲ ಹಾಗೂ ಅವರು ಖಾಸಗಿ ವಲಯದಲ್ಲಿ ತೋರಿಸಿದ ದಕ್ಷತೆಯನ್ನು ಸರಕಾರದ ಕೆಲಸದಲ್ಲಿ ತೋರಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಸರಕಾರದಿಂದ ನೇಮಕಗೊಳ್ಳುವ ಅಧಿಕಾರಿಗಳಿಗೆ ಇರುವ ಭದ್ರತೆ ಹಾಗೂ ಹೊಣೆಗಾರಿಕೆ ಇವರಿಗೆ ಇರಲು ಸಾಧ್ಯವಿಲ್ಲ.

ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಆಡಳಿತವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ನೇಮಕಾತಿಯ ಹಿಂದೆ ಬೇರಾವುದೇ ಹುನ್ನಾರ ಇರುವಂತೆ ಕಾಣುತ್ತಿದೆ. ಅಚ್ಛೇ ದಿನದ ಹೆಸರು ಹೇಳಿ ಈ ಸರಕಾರ ಕೈಗೊಂಡ ನೋಟು ಅಮಾನ್ಯ ಹಾಗೂ ಜಿಎಸ್‌ಟಿಯಂತಹ ಆತುರದ ಕ್ರಮಗಳು ದುಷ್ಪರಿಣಾಮ ಬೀರಿದಂತೆ ಸರಕಾರದ ಉನ್ನತ ಹುದ್ದೆಗಳಿಗೆ ಮಾಡಿಕೊಳ್ಳುವ ನೇಮಕಾತಿಗಳು ಕೂಡಾ ದುಷ್ಪರಿಣಾಮ ಬೀರಿದರೆ ಅಚ್ಚರಿಪಡಬೇಕಾಗಿಲ್ಲ. ಸರಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಇಂತಹ ಗಿಮಿಕ್‌ಗಳನ್ನು ಮಾಡುತ್ತಿದೆ ಎಂದರೆ ಅಚ್ಚರಿಪಡಬೇಕಾಗಿಲ್ಲ. ಸರಕಾರದ ಉನ್ನತ ಹುದ್ದೆಗಳಿಗೆ ನೇಮಕಾತಿ ಎಂದರೆ ಸಾಮಾನ್ಯ ಸಂಗತಿಯಲ್ಲ. ಇದು ದೇಶದ 130 ಕೋಟಿ ಜನತೆಯ ಬದುಕು ಮತ್ತು ಬವಣೆಗಳಿಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಈಗ ಇರುವ ಐಎಎಸ್ ಅಧಿಕಾರಿಗಳು ಸಂಪೂರ್ಣವಾಗಿ ಜನಪರವಾಗಿ ಕೆಲಸ ಮಾಡುತ್ತಾರೆಂದು ಹೇಳಲು ಸಾಧ್ಯವಿಲ್ಲವಾದರೂ ಖಾಸಗಿರಂಗದಿಂದ ಬರುವ ಈ ಪರಿಣಿತರನ್ನು ಗಮನಿಸಿದರೆ ಈಗ ಇರುವ ಅಧಿಕಾರಿಗಳು ಎಷ್ಟೋ ಮಟ್ಟಿಗೆ ಉತ್ತಮವಾಗಿದ್ದಾರೆ. ಹೊರಗಿನಿಂದ ನೇಮಕ ಮಾಡಿಕೊಳ್ಳುವ ಅಧಿಕಾರಿಗಳು ದಕ್ಷವಾಗಿ ಕಾರ್ಯ ನಿರ್ವಹಿಸುತ್ತಾರೆಂದು ಹೇಳಲು ಗ್ಯಾರಂಟಿ ಇಲ್ಲ. ಇದಕ್ಕೆ ಪ್ರತಿಯಾಗಿ ಸರಕಾರದ ಆಯಕಟ್ಟಿನ ಸ್ಥಾನದಲ್ಲಿ ಖಾಸಗಿ ವಲಯದ ವ್ಯಕ್ತಿಗಳನ್ನು ತಂದು ಕೂರಿಸುವುದರಿಂದ ಸರಕಾರದ ಮಾಹಿತಿಯ ಗೌಪ್ಯತೆಗೆ ಧಕ್ಕೆ ಉಂಟಾದರೆ ಅಚ್ಚರಿ ಪಡಬೇಕಾಗಿಲ್ಲ.

ಇದುವರೆಗೆ ಕೆಲವು ವೈಜ್ಞಾನಿಕ, ತಾಂತ್ರಿಕ ಇಲಾಖೆಯನ್ನು ಬಿಟ್ಟರೆ ಸರಕಾರದ ಉನ್ನತ ಸ್ಥಾನಗಳಿಗೆ ಐಎಎಸ್ ಹಾಗೂ ಅದಕ್ಕೆ ಸಮಾನವಾದ ಕೇಂದ್ರ ಹಾಗೂ ರಾಜ್ಯಗಳ ಸೇವೆಯಿಂದ ಬಂದವರನ್ನು ನೇಮಕ ಮಾಡಿಕೊಳ್ಳುತ್ತಾ ಬರಲಾಗಿದೆ. ಇವರ ಅಧಿಕಾರಶಾಹಿ ವರ್ತನೆಯ ಬಗ್ಗೆ ಆಕ್ಷೇಪವಿದ್ದರೂ ಇವರ ಅಪಾರ ಅನುಭವಗಳು ಸರಕಾರಕ್ಕೆ ಉಪಯುಕ್ತವಾಗಿದೆ. ಈ ಅನುಭವದ ಆಧಾರದಲ್ಲಿ ಭಡ್ತಿ ಪಡೆದುಕೊಂಡು ಇವರು ಬಂದವರಾಗಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಸ್ಥಾನಗಳಿಗೆ ನೇಮಕಗೊಂಡ ಅಧಿಕಾರಿಗಳು ತಮ್ಮ ಅನುಭವದಿಂದ ಆಡಳಿತ ನಿರ್ವಹಣೆಗೆ ಕೊಡುಗೆ ನೀಡಿದ್ದಾರೆ. ಇವರ ಅನುಭವವನ್ನು ಕಡೆಗಣಿಸಲು ಸಾಧ್ಯವಿಲ್ಲ. ಆದರೆ, ಖಾಸಗಿ ವಲಯದಿಂದ ಸರಕಾರ ನೇಮಕ ಮಾಡಿಕೊಳ್ಳಲು ಹೊರಟಿರುವ ಪರಿಣಿತರು ಮೂರು ವರ್ಷಗಳ ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುತ್ತಾರೆ. ಇಂತಹವರು ಯಾರಿಗೆ ವಿಧೇಯರಾಗಿರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಇವರ ನಿಷ್ಠೆ ದೇಶದ ಪ್ರಜೆಗಳಿಗೆ ಇರುತ್ತದೋ ಇಲ್ಲವೇ ತಮ್ಮನ್ನು ನೇಮಕ ಮಾಡಿದ ಪಕ್ಷಕ್ಕೆ ಇರುತ್ತದೋ ಅಥವಾ ಅವರು ಯಾವ ಕಂಪೆನಿಯಿಂದ ಬಂದವರಾಗಿತ್ತಾರೋ ಆ ಕಂಪೆನಿಗಳ ಮಾಲಕರಿಗೆ ನಿಷ್ಠೆಯಾಗಿರುತ್ತಾರೋ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.

ಈವರೆಗೆ ಮೋದಿ ಸರಕಾರ ರಾಜ್ಯಪಾಲರ ಹುದ್ದೆಗಳಿಗೆ ಮಾತ್ರವಲ್ಲ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ, ವಿಶ್ವವಿದ್ಯಾನಿಲಯಗಳ ಉನ್ನತ ಹುದ್ದೆಗಳಿಗೆ ಮಾಡಿಕೊಂಡಿರುವ ನೇಮಕಗಳಲ್ಲಿ ಕಂಡುಕೊಂಡಿರುವ ಏಕೈಕ ಸಂಗತಿ ಎಂದರೆ ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರಿಗೆ ಅವಕಾಶ ಕಲ್ಪಿಸಲಾಗಿದೆ. ಸಂಘನಿಷ್ಠೆಯೇ ಅರ್ಹತಾ ಮಾನದಂಡವಾಗಿದೆ. ಈಗ ಸರಕಾರ ನೇಮಕ ಮಾಡಿಕೊಳ್ಳಲು ಹೊರಟಿರುವ ಉನ್ನತ ಹುದ್ದೆಗಳಲ್ಲಿ ಕೂಡಾ ಇದೇ ಮಾನದಂಡ ಅನುಸರಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಮೋದಿ ಸರಕಾರ ದೇಶದ ಭಾರೀ ಕಾರ್ಪೊರೇಟ್ ಕಂಪೆನಿಗಳ ಕೈಗೊಂಬೆ ಸರಕಾರ ಎಂದು ಹೆಸರಾಗಿದೆ. ಸರಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಪೊರೇಟ್ ವಲಯದಿಂದ ನೇಮಕ ಮಾಡಿಕೊಳ್ಳುವ ಪರಿಣಿತರು ಯಾರ ಹಿತಾಸಕ್ತಿಯನ್ನು ರಕ್ಷಿಸುತ್ತಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪರಿಸರ ಇಲಾಖೆಯಂತಹ ಸೂಕ್ಷ್ಮ ಇಲಾಖೆಯ ಉನ್ನತ ಸ್ಥಾನದಲ್ಲಿ ಅದಾನಿ ಇಲ್ಲವೇ ಅಂಬಾನಿ ಕಂಪೆನಿಯಿಂದ ನೇಮಕ ಮಾಡಿಕೊಳ್ಳುವ ಪರಿಣಿತರು ಬಂದು ಕುಳಿತರೆ ಎಂತಹ ಅನಾಹುತ ಉಂಟಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ.

ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೇ ಈ ದೇಶ ಒಪ್ಪಿಕೊಂಡು ಅನುಸರಿಸುತ್ತಾ ಬಂದ ಸ್ವಾವಲಂಬಿ ಆರ್ಥಿಕ ಧೋರಣೆಗಳನ್ನು ಬದಲಿಸಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ರಕ್ಷಿಸುವ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಈ ಸರಕಾರ ಕೈಗೊಳ್ಳುತ್ತಿರುವ ಪ್ರತಿಯೊಂದು ಕ್ರಮಗಳೂ ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ರಕ್ಷಿಸುವ ಕ್ರಮವಾಗಿದೆ. ಈ ನೇಮಕಾತಿಗಳಲ್ಲಿ ಕೂಡಾ ಇದು ಪುನರಾವರ್ತನೆಯಾದರೆ ಅಚ್ಚರಿಪಡಬೇಕಾಗಿಲ್ಲ. ಸರಕಾರದ ಉನ್ನತ ಹುದ್ದೆಗಳಿಗೆ ಮೋದಿ ಸರಕಾರದಿಂದ ನೇಮಕಗೊಳ್ಳುವ ಬಹುತೇಕ ಪರಿಣಿತರು ಆಳುವ ವರ್ಗದ ಬಗ್ಗೆ ಸಹಾನುಭೂತಿ ಉಳ್ಳವರಾಗಿರುತ್ತಾರೆ. ಮೇಲ್ವರ್ಗದವರೇ ಆಗಿರುತ್ತಾರೆ ಹಾಗೂ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಇಂತಹವರ ನೇಮಕದಿಂದ ಆಡಳಿತ ವ್ಯವಸ್ಥೆಯಲ್ಲಿ ಎಂತಹ ಪರಿಣಾಮ ಉಂಟಾಗುತ್ತದೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಈ ನೇಮಕಾತಿಗಳ ವಿರುದ್ಧ ಜನಪರ ಸಂಘಟನೆಗಳು ಮತ್ತು ಪ್ರತಿಪಕ್ಷಗಳು ಪ್ರಬಲವಾದ ಪ್ರತಿರೋಧವನ್ನು ಒಡ್ಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News