ವಿವಾದಿತ ಸ್ಥಳದಲ್ಲಿ ಆರೆಸ್ಸೆಸ್ ಶಾಖೆಗೆ ತಡೆ: ಐಪಿಎಸ್ ಅಧಿಕಾರಿ ಎತ್ತಂಗಡಿ

Update: 2018-06-28 04:30 GMT

ಲಕ್ನೋ, ಜೂ. 28: ವಿವಾದಿತ ಸ್ಥಳದಲ್ಲಿ ಆರೆಸ್ಸೆಸ್ ಶಾಖೆ ನಡೆಸುತಿದ್ದುದನ್ನು ತಡೆದ ಐಪಿಎಸ್ ಅಧಿಕಾರಿಯೊಬ್ಬರನ್ನು ಎತ್ತಂಗಡಿ ಮಾಡಿದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

ಬಿಜೆಪಿ ಶಾಸಕರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಹಿಂದಿನ ಆಡಳಿತದ ಅವಧಿಯಲ್ಲಿ ಐಪಿಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರನ್ನು ವರ್ಗಾಯಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಆಗ್ರಾದ ತಾಜ್‌ಗಂಜ್ ಪ್ರದೇಶ ಎರಡು ಸಮುದಾಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ. ಈ ಆಸ್ತಿಯ ಮಾಲಿಕತ್ವ ತಮ್ಮದು ಎಂಬ ಪ್ರತಿಪಾದನೆಯನ್ನು ಎರಡೂ ಸಮುದಾಯಗಳು ಮಾಡುತ್ತಾ ಬಂದಿವೆ. ಆರು ತಿಂಗಳ ಹಿಂದೆ, ಈ ಜಾಗದಲ್ಲಿ ಉರೂಸ್ ಏರ್ಪಡಿಸಲು ಅನುಮತಿ ನಿರಾಕರಿಸಲಾಗಿತ್ತು. ಈ ವಿವಾದಿತ ಭೂಮಿ ಮಝಾರ್‌ಗೆ ಸನಿಹದಲ್ಲಿದೆ. ಆ ಬಳಿಕ ಇಲ್ಲಿಗೆ ಪೊಲೀಸ್ ಕಾವಲು ಒದಗಿಸಲಾಗಿದೆ.

ಒಂದು ತಿಂಗಳ ಹಿಂದೆ ಇಲ್ಲಿ ಆರೆಸ್ಸೆಸ್ ಶಾಖೆ ಆರಂಭಿಸಿದೆ. ಆ ಬಳಿಕ ಉಭಯ ಸಮುದಾಯಗಳ ವೈಮನಸ್ಸು ಮತ್ತಷ್ಟು ಹೆಚ್ಚಿದೆ. ಕಳೆದ ಬುಧವಾರ ಪೊಲೀಸರು, ಜಾಗದ ವಿವಾದ ನ್ಯಾಯಾಲಯದಲ್ಲಿರುವುದರಿಂದ ಇಲ್ಲಿ ಆರೆಸ್ಸೆಸ್ ಶಾಖೆಯನ್ನು ನಿಷೇಧಿಸಿದರು. ರಾಜ್‌ಕುಮಾರ್ ಯಾದವ್ ಎಂಬ ಸ್ಥಳೀಯ ಠಾಣಾಧಿಕಾರಿ ಈ ನಿರ್ಧಾರ ಕೈಗೊಂಡಿದ್ದರು.

ತಕ್ಷಣ ಬಿಜೆಪಿ ಶಾಸಕರು ಸ್ಥಳಕ್ಕೆ ಆಗಮಿಸಿ ಪೊಲೀಸರ ವಿರುದ್ಧ ಧರಣಿ ಆರಂಭಿಸಿದರು. ಬಳಿಕ ಕೋತ್ವಾಲ್ ಬಳಿ ದೂರು ಒಯ್ದರು. ಆದರೆ ಅಲ್ಲೂ ಪೊಲೀಸ್ ಅಧಿಕಾರಿಯ ನಿರ್ಧಾರವನ್ನೇ ಸಮರ್ಥಿಸಲಾಯಿತು. ಕೊನೆಗೆ ನಗರ ಎಸ್ಪಿ ಕನ್ವರ್ ಅನುಪಮ್ ಸಿಂಗ್ ಕೂಡಾ ತಮ್ಮ ಅಧೀನ ಅಧಿಕಾರಿಯನ್ನೇ ಬೆಂಬಲಿಸಿ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರವನ್ನು ಶ್ಲಾಘಿಸಿದರು.

ಆದರೆ ನಿಷ್ಪಕ್ಷಪಾತ ನಿರ್ಧಾರಕ್ಕೆ ಪೊಲೀಸರು ಬೆಲೆ ತೆತ್ತಿದ್ದಾರೆ. ಕನ್ವರ್ ಅನುಪಮ್ ಸಿಂಗ್ ಅವರನ್ನು ವರ್ಗಾಯಿಸಲಾಗಿದೆ. ಕೋತ್ವಾಲ್ ಶೈಲೇಂದ್ರ ಸಿಂಗ್ ಹಾಗೂ ಸ್ಥಳೀಯ ಠಾಣಾಧಿಕಾರಿ ರಾಜ್‌ಕುಮಾರ್ ಸಿಂಗ್ ಅವರಿಗೂ ವರ್ಗಾವಣೆ ಆದೇಶ ಬಂದಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಈ ಪ್ರಕರಣದಲ್ಲಿ ನೇರ ಹಸ್ತಕ್ಷೇಪ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಅಚ್ಚರಿಯೆಂದರೆ ವಿರೋಧ ಪಕ್ಷಗಳು ಈ ಬಗ್ಗೆ ಮೌನ ತಾಳಿವೆ.

ಇದಾದ ಬಳಿಕ ಆಗ್ರಾದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಜೂನ್ 18ರಂದು ಆರೆಸ್ಸೆಸ್ ಕಾರ್ಯಕರ್ತರು ಪವನಧಾಮ ಕಾಲನಿಯಲ್ಲಿ ಶಾಖೆ ನಡೆಸಿದ್ದು, 68 ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿ, ನಾವು ಉಗ್ರರನ್ನು ಬೆಳೆಸುತ್ತಿದ್ದೇವೆ ಎಂದು ಹೇಳಿ ಕೇಸರಿ ಧ್ವಜವನ್ನು ಕಿತ್ತೆಸೆದಿದ್ದಾರೆ. ಇಂಥ ಕೃತ್ಯ ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಆಗಿರಲಿಲ್ಲ ಎಂದು ಆರೆಸ್ಸೆಸ್ ಪ್ರಚಾರ ವಿಭಾಗದ ಕಾರ್ಯಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News