ಅನ್ನಾಪೊಲೀಸ್ ಪತ್ರಿಕಾಲಯದಲ್ಲಿ ಶೂಟೌಟ್‌: ಐದು ಮಂದಿ ಮೃತ್ಯು

Update: 2018-06-29 17:32 GMT

ವಾಷಿಂಗ್ಟನ್, ಜೂ. 29: ಸಮೀಪದ ಅನ್ನಾಪೊಲೀಸ್‌ನ ’ಕ್ಯಾಪಿಟಲ್ ಗಜೆಟ್’ ಪತ್ರಿಕಾಲಯದಲ್ಲಿ ಗುರುವಾರ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ.

ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಬಿಳಿಯ ವಯಸ್ಕ ವ್ಯಕ್ತಿ ರೈಫಲ್‌ನಲ್ಲಿ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಕಚೇರಿಯ ಗಾಜಿನ ಬಾಗಿಲಿನ ಮೂಲಕ ಈ ವ್ಯಕ್ತಿ ಪತ್ರಿಕಾಲಯದ ಸಿಬ್ಬಂದಿ ಮೇಲೆ ಹೇಗೆ ಗುಂಡಿನ ದಾಳಿ ನಡೆಸಿದ ಎನ್ನುವುದನ್ನು ದೈನಿಕದ ವರದಿಗಾರ ಫಿಲ್ ಡೇವಿಸ್ ಟ್ವೀಟ್ ಮಾಡಿದ್ದಾರೆ.

"ಪತ್ರಿಕಾಲಯದಲ್ಲಿ ಕಾರ್ಯನಿರತರಾಗಿದ್ದಾಗ, ಹಲವಾರು ಮಂದಿಯ ಮೇಲೆ ದಿಢೀರನೆ ಗುಂಡಿನಮಳೆಗೆರೆಯುವುದಕ್ಕಿಂತ ಭಯಾನಕ ಸನ್ನಿವೇಶ ಬೇರಾವುದೂ ಇಲ್ಲ" ಎಂದು ಡೇವಿಸ್ ಹೇಳಿದ್ದಾರೆ.

ಮೆರಿಲ್ಯಾಂಡ್ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆನ್ ಆರ್ಡಿನೆಲ್ ಕೌಂಟಿಯ ಹಂಗಾಮಿ ಪೊಲೀಸ್ ಮುಖ್ಯಸ್ಥ ಬಿಲ್ ಕ್ರಾಂಫ್, ಘಟನೆಯಲ್ಲಿ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಪ್ರಕಟಿಸಿದರು. ಇತರ ಮೂರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಲೆಫ್ಟಿನೆಂಟ್ ರಯಾನ್ ಫ್ರಶನ್ ಹೇಳಿದ್ದಾರೆ. ಶಂಕಿತ ವ್ಯಕ್ತಿಯ ಹೆಸರು ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆತ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಅಧಿಕಾರಿ ಸ್ವೀವ್ ಚುಹ್ ಸ್ಪಷ್ಟಪಡಿಸಿದ್ದಾರೆ.

ಶಂಕಿತನಿಂದ ಎಲ್ಲ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ಕು ಮಹಡಿಯ ಪತ್ರಿಕಾ ಕಚೇರಿ ಇದೀಗ ಸುರಕ್ಷಿತ ಎಂದು ಪೊಲೀಸರು ಹೇಳಿದ್ದಾರೆ. 170 ಮಂದಿಯನ್ನು ಸುರಕ್ಷಿತವಾಗಿ ಕಟ್ಟಡದಿಂದ ಹೊರಕ್ಕೆ ಕರೆತರಲಾಗಿದೆ ಎಂದು ಅವರು ವಿವರಿಸಿದ್ದಾರೆ.

"ಇದು ವಿಧ್ವಂಸಕ ಮತ್ತು ಹೃದಯವಿದ್ರಾವಕ ಆಘಾತ" ಎಂದು ಕ್ಯಾಪಿಟಲ್ ಗಜೆಟ್ ಸಂಪಾದಕ ಜಿಮ್ಮಿ ಡೆಬಟ್ಸ್ ಟ್ವೀಟಿಸಿದ್ದಾರೆ. ಆದರೆ ಪತ್ರಕರ್ತರನ್ನು ಗುರಿ ಮಾಡಿ ಈ ದಾಳಿ ನಡೆದಿದೆಯೇ ಎನ್ನುವುದು ದೃಢಪಟ್ಟಿಲ್ಲ. ವರ್ಜೀನಿಯಾದ ರನೋಕ್‌ನಲ್ಲಿ ಇಬ್ಬರು ಪತ್ರಕರ್ತರನ್ನು ಸ್ಥಳೀಯ ಟಿವಿ ಚಾನಲ್‌ನ ನೇರಪ್ರಸಾರದ ವೇಳೆ ಹತ್ಯೆ ಮಾಡಿದ 2015ರ ಘಟನೆಯನ್ನು ಇದು ನೆನಪಿಸಿದೆ.

ಪತ್ರಿಕೆಯ ವಿರುದ್ಧ ದ್ವೇಷ ಹೊಂದಿದ್ದ!

‘ಕ್ಯಾಪಿಟಲ್ ಗಝೆಟ್’ ಪತ್ರಿಕೆಯ ಮೇಲೆ ದಾಳಿ ನಡೆಸಿ ಐವರನ್ನು ಕೊಂದ ಪ್ರಕರಣದ ಆರೋಪಿ ಜ್ಯಾರಡ್ ವಾರನ್ ರ್ಯಾಮಸ್ 2012ರಲ್ಲಿ ಪತ್ರಿಕೆ ಮತ್ತು ಅದರ ಓರ್ವ ಪತ್ರಕರ್ತನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಈ ಪತ್ರಿಕಾ ಗುಂಪಿನ ಮುಖ್ಯ ಪತ್ರಿಕೆ ‘ದ ಕ್ಯಾಪಿಟಲ್’ನ ಮಾಜಿ ಅಂಕಣಕಾರ ಥಾಮಸ್ ಹ್ಯಾರ್ಟ್ಲೇ 2011ರಲ್ಲಿ ಬರೆದ ಅಂಕಣವೊಂದರ ಬಗ್ಗೆ ಆರೋಪಿಯು ಆಕ್ರೋಶಿತನಾಗಿದ್ದನು.

ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬರಿಗೆ ಆರೋಪಿಯು ಹಲವಾರು ಇಮೇಲ್‌ಗಳನ್ನು ಕಳುಹಿಸಿದ್ದನು ಹಾಗೂ ಅವುಗಳಲ್ಲಿ ಮಹಿಳೆಯನ್ನು ಅಶ್ಲೀಲವಾಗಿ ಕರೆದಿದ್ದನು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಹಿಳೆಗೆ ಸೂಚಿಸಿದ್ದನು ಎಂಬುದಾಗಿ ತನ್ನ ಅಂಕಣದಲ್ಲಿ ಹ್ಯಾರ್ಟ್ಲೇ ಬರೆದಿದ್ದರು.

ಅಂಕಣ ಪ್ರಕಟಗೊಳ್ಳುವ 5 ದಿನಗಳ ಮೊದಲು ಆರೋಪಿ ರ್ಯಾಮಸ್ ತನ್ನ ವಿರುದ್ಧದ ಕ್ರಿಮಿನಲ್ ಕಿರುಕುಳ ಆರೋಪವನ್ನು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದನು.

ಅವರ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯವೊಂದು 2013ರಲ್ಲಿ ವಜಾಗೊಳಿಸಿತ್ತು ಹಾಗೂ ಈ ನಿರ್ಧಾರವನ್ನು ಮೇಲ್ಮನವಿ ನ್ಯಾಯಾಲಯವೊಂದು 2015ರಲ್ಲಿ ಎತ್ತಿ ಹಿಡಿತ್ತು.

ಚಕ್ರವರ್ತಿಗಳೂ ದೇವರಿಗೆ ಉತ್ತರ ಕೊಡಬೇಕು!

ಆರೋಪಿ ರ್ಯಾಮಸ್ ಹೆಸರಿನಲ್ಲಿ 2014ರಲ್ಲಿ ಚಲಾವಣೆಗೆ ಬಂದ ವೆಬ್‌ಸೈಟ್‌ನಲ್ಲಿ ನ್ಯಾಯಾಲಯದಲ್ಲಿರುವ ಪ್ರಕರಣದ ಎಲ್ಲ ದಾಖಲೆಗಳನ್ನು ಹಾಕಲಾಗಿತ್ತು.

ಅದರಲ್ಲೇ ಒಂದು ಸಂದೇಶವೂ ಇತ್ತು.

‘‘ತಾವು ಮಹತ್ವದ ಕಾವಲುನಾಯಿ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ, ಕಾವಲುನಾಯಿಗಳ ಮೇಲೆ ಯಾರು ನಿಗಾ ಇಡುತ್ತಾರೆ?’’

 ‘‘ಚಕ್ರವರ್ತಿಗಳೂ ದೇವರಿಗೆ ಉತ್ತರ ಕೊಡಬೇಕು. ಆಧುನಿಕ ಕಾಲದ ವಿಚಾರಣೆ ಶೀಘ್ರದಲ್ಲೇ ಇದೆ. ಸಂಭಾವ್ಯ ತೀರ್ಪು ಕಠಿಣವಾಗಿರುತ್ತದೆ’’ ಎಂಬುದಾಗಿ ಆ ಸಂದೇಶದಲ್ಲಿ ಬರೆಯಲಾಗಿದೆ.

ನಾಳೆ ಪತ್ರಿಕೆ ಹೊರಬರುತ್ತದೆ

ಪತ್ರಿಕೆಯ ಉದ್ಯೋಗಿಗಳ ಮೇಲೆ ದಾಳಿ ನಡೆದ ಹೊರತಾಗಿಯೂ, ನಾಳಿನ ಪತ್ರಿಕೆ ಹೊರಬರುತ್ತದೆ ಎಂದು ‘ಕ್ಯಾಪಿಟಲ್ ಗಝೆಟ್’ನ ಪತ್ರಕರ್ತರು ಘೋಷಿಸಿದ್ದಾರೆ.

‘‘ನಾಳೆ ನಾವು ಪತ್ರಿಕೆಯನ್ನು ಹೊರತರುತ್ತೇವೆ’’ ಎಂದು ಪತ್ರಿಕೆಯ ವರದಿಗಾರ ಚೇಸ್ ಕುಕ್ ಕಾರ್ ಪಾರ್ಕಿಂಗ್‌ನ ಸ್ಥಳದಲ್ಲಿ ಹೇಳಿದರು.

ಪತ್ರಿಕಾ ಕಚೇರಿಯಲ್ಲಿ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಅವರು ಕಚೇರಿಯಲ್ಲಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News