ತ್ರಿಪುರಾ: ಮಕ್ಕಳ ಕಳ್ಳತನ ವದಂತಿ ಹೋಗಲಾಡಿಸಲು ನಿಯೋಜಿಸಿದ್ದ ವ್ಯಕ್ತಿಯ ಥಳಿಸಿ ಹತ್ಯೆ

Update: 2018-06-30 04:34 GMT

ಅಗರ್ತಲ, ಜೂ. 30: ತ್ರಿಪುರಾದಲ್ಲಿ ಮಕ್ಕಳ ಕಳ್ಳತನ ಬಗೆಗಿನ ವದಂತಿ ಹೋಗಲಾಡಿಸುವ ಸಲುವಾಗಿ ಸರ್ಕಾರ ನಿಯೋಜಿಸಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಹತ್ಯೆ ಮಾಡಿದ್ದಾರೆ.

ಗ್ರಾಮದಿಂದ ಗ್ರಾಮಕ್ಕೆ ಮೈಕ್ ಕಟ್ಟಿದ ವಾಹನದಲ್ಲಿ ತೆರಳಿ ಜಾಗೃತಿ ಮೂಡಿಸುವ ಸಲುವಾಗಿ ಸುಕಾಂತ ಚಕ್ರವರ್ತಿ ಎಂಬಾತನನ್ನು ಸರ್ಕಾರ ನಿಯೋಜಿಸಿತ್ತು. ಈತನನ್ನು ದಕ್ಷಿಣ ತ್ರಿಪುರಾ ಜಿಲ್ಲೆಯ ಕಲಚೆರ್ರಾ ಎಂಬ ಗ್ರಾಮದಲ್ಲಿ ಹತ್ಯೆ ಮಾಡಲಾಗಿದೆ. ಈತನ ಜತೆಗಿದ್ದ ಇಬ್ಬರ ಮೇಲೂ ಹಲ್ಲೆ ನಡೆದಿದೆ. ಇವರು ಪ್ರಯಾಣಿಸುತ್ತಿದ್ದ ವಾಹನವನ್ನು ಜಖಂಗೊಳಿಸಲಾಗಿದೆ. ಇಂಥದ್ದೇ ಕಾರಣಕ್ಕೆ ಪಶ್ಚಿಮ ತ್ರಿಪುರಾ ಜಿಲ್ಲೆಯ ಮೋಹನ್‌ಪುರದಲ್ಲಿ ಸಿದ್ಧ ಉಡುಪು ಮಾರಾಟ ಮಾಡುವ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿದೆ.

ಗುರುವಾರ ಸಂಜೆ ಚಕ್ರವರ್ತಿ ಹಾಗೂ ಆತನ ಸಹಚರರು ಕಲಚೆರ್ರಿ ಗ್ರಾಮಕ್ಕೆ ಬಂದಾಗ ಈ ಘಟನೆ ನಡೆದಿದೆ. ಇವರು ಮಕ್ಕಳ ಕಳ್ಳರಿರಬೇಕು ಎಂದು ಶಂಕಿಸಿದ ಸ್ಥಳೀಯ ಯುವಕರು ಇವರ ಮೇಲೆ ಹಲ್ಲೆ ಮಾಡಿದರು ಎಂದು ಎಸ್ಪಿ ಜಲಸಿಂಗ್ ಮೀನಾ ಹೇಳಿದ್ದಾರೆ. ಜನರಿಗೆ ಒಳ್ಳೆಯದು ಮಾಡುವ ಸಲುವಾಗಿ ಸರ್ಕಾರವೇ ನಮ್ಮನ್ನು ಇಲ್ಲಿಗೆ ಕಳುಹಿಸಿದೆ ಎಂದು ಪದೇ ಪದೇ ಚಕ್ರವರ್ತಿ ತಂಡ ಹೇಳಿದರೂ ಜನ ನಂಬದೇ ಹಲ್ಲೆ ನಡೆಸಿದರು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಹನ್ನೊಂದು ವರ್ಷದ ಬಾಲಕನೊಬ್ಬನನ್ನು ಅಂಗಾಂಗ ಕಳ್ಳ ಸಾಗಾಣಿಕೆದಾರರು ಹತ್ಯೆ ಮಾಡಿದ್ದಾರೆ ಎಂಬ ವದಂತಿ ಕಳೆದ ವಾರ ಹಬ್ಬಿದ್ದ ಹಿನ್ನೆಲೆಯಲ್ಲಿ ಸರ್ಕಾರ, ಜನಜಾಗೃತಿ ಮೂಡಿಸುವ ಸಲುವಾಗಿ ಚಕ್ರವರ್ತಿಯನ್ನು ನಿಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News