ಜಮ್ಮು-ಕಾಶ್ಮೀರ:‘ಸೀಮಾ ಭವನ’ಗಳ ನಿರ್ಮಾಣ ಪ್ರಕ್ರಿಯೆಗೆ ಚಾಲನೆ

Update: 2018-06-30 14:34 GMT

 ಜಮ್ಮು,ಜೂ.30: ಜಮ್ಮ-ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ಗಡಿ ಆಶ್ರಯ ತಾಣ ‘ಸೀಮಾ ಭವನ’ಗಳ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿರುವ ಪೂಂಛ್ ಮತ್ತು ರಾಜೌರಿ ಜಿಲ್ಲಾಡಳಿತಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಲು ಪ್ರತ್ಯೇಕ ಸಭೆಗಳನ್ನು ನಡೆಸಿವೆ. ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಿಂದ ಶೆಲ್ ದಾಳಿಗಳ ಸಂದರ್ಭದಲ್ಲಿ ಅನಿವಾರ್ಯವಾಗಿ ತಮ್ಮ ಮನೆಗಳನ್ನು ತೊರೆಯುವ ಗಡಿಗ್ರಾಮಗಳ ನಿವಾಸಿಗಳಿಗೆ ಸೀಮಾ ಭವನಗಳು ಆಶ್ರಯವೊದಗಿಸಲಿವೆ. ಪಾಕಿಸ್ತಾನಿ ರೇಂಜರ್‌ಗಳು ಕದನ ವಿರಾಮವನ್ನು ಉಲ್ಲಂಘಿಸಿ ಶೆಲ್ ದಾಳಿಗಳನ್ನು ನಡೆಸಿದಾಗ ನಿರ್ವಸಿತರಾಗುವ ಗಡಿ ನಿವಾಸಿಗಳಿಗೆ ಸದ್ಯ ಶಿಕ್ಷಣ ಸಂಸ್ಥೆಗಳಂತಹ ಸರಕಾರಿ ಕಟ್ಟಡಗಳಲ್ಲಿ ಆಶ್ರಯ ನೀಡಲಾಗುತ್ತಿದೆ.

ಶುಕ್ರವಾರ ನಡೆದ ಜಿಲ್ಲಾಡಳಿತಗಳ ಸಭೆಗಳಲ್ಲಿ ಸೀಮಾ ಭವನಗಳ ನಿರ್ಮಾಣಕ್ಕಾಗಿ ಜಾಗಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಬಂಕರ್‌ಗಳ ನಿರ್ಮಾಣದ ಕುರಿತೂ ಚರ್ಚಿಸಲಾಗಿದೆ. ಭೂಗತ ಬಂಕರ್‌ಗಳಿಗಾಗಿ ಹೆಚ್ಚಿನ ನಿವೇಶನಗಳನ್ನು ರಸ್ತೆ ಮತ್ತು ಕಟ್ಟಡಗಳ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕದನ ವಿರಾಮದ ಸಂದರ್ಭಗಳಲ್ಲಿ ಸುಲಭವಾಗಿ ತಲುಪಬಹುದಾದ ಕಾಲೇಜುಗಳು,ಶಾಲೆಗಳು,ಆಸ್ಪತ್ರೆಗಳು ಮತ್ತು ಪೊಲೀಸ್ ಚೌಕಿಗಳ ಸಮೀಪದ ಸುರಕ್ಷಿತ ಪ್ರದೇಶಗಳಲ್ಲಿ ಬಂಕರ್‌ಗಳನ್ನು ನಿರ್ಮಿಸಲಾಗುತ್ತಿದೆ.

ರಾಜೌರಿ ಜಿಲ್ಲಾಡಳಿತವು ಈಗಾಲೇ 102 ಪ್ರತ್ಯೇಕ ಬಂಕರ್‌ಗಳನ್ನು ನಿರ್ಮಿಸಿ ಅವುಗಳನ್ನು ನಿರ್ವಸಿತ ಕುಟುಂಬಗಳಿಗೆ ಹಸ್ತಾಂತರಿಸಿದೆ. 10 ಸಮುದಾಯ ಬಂಕರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರತ್ಯೇಕ ಬಂಕರ್‌ಗಳು 10-15 ಜನರಿಗೆ ಮತ್ತು ಸಮುದಾಯ ಬಂಕರ್‌ಗಳು 40-50 ಜನರಿಗೆ ಸ್ಥಳಾವಕಾಶವನ್ನು ಹೊಂದಿವೆ.

ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆಯ ಮೇರೆಗೆ ಜಮ್ಮು ಪ್ರದೇಶದಲ್ಲಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ 14,000ಕ್ಕೂ ಅಧಿಕ ಪ್ರತ್ಯೇಕ ಮತ್ತು ಸಮುದಾಯ ಬಂಕರ್‌ಗಳನ್ನು ನಿರ್ಮಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News