ವಲಸಿಗ ರಕ್ಷಣಾ ಹಡಗುಗಳಿಗೆ ಮುಚ್ಚಿದ ಇಟಲಿ ಬಂದರುಗಳು

Update: 2018-06-30 17:27 GMT

ರೋಮ್ (ಇಟಲಿ), ಜೂ. 30: ವಲಸಿಗ ರಕ್ಷಣಾ ಹಡಗೊಂದು ತನ್ನ ಬಂದರುಗಳಲ್ಲಿ ತಂಗುವುದನ್ನು ಇಟಲಿಯ ನೂತನ ಸರಕಾರ ಶುಕ್ರವಾರ ನಿಷೇಧಿಸಿದೆ.

ವಲಸೆಗೆ ಸಂಬಂಧಿಸಿ ಐರೋಪ್ಯ ನಾಯಕರ ನಡುವೆ ನಡೆದ ಕಾವೇರಿದ ಸಭೆಯು ಕೊನೆಗೊಂಡ ಗಂಟೆಗಳ ಬಳಿಕ ಇಟಲಿ ಈ ಕ್ರಮ ತೆಗೆದುಕೊಂಡಿದೆ. ಇದು ಈ ತಿಂಗಳಲ್ಲಿ ಇಟಲಿ ಸರಕಾರ ತೆಗೆದುಕೊಂಡಿರುವ ಇಂಥ ಮೂರನೇ ನಿರ್ಧಾರವಾಗಿದೆ.

ಇಟಲಿಯ ಬಂದರುಗಳಲ್ಲಿ ತಂಗಲು ಸ್ಪೇನ್‌ನ ಮಾನವೀಯ ಸಂಘಟನೆ ‘ಪ್ರೊಆ್ಯಕ್ಟಿವ ಓಪನ್ ಆರ್ಮ್ಸ್’ನ ಹಡಗಿಗೆ ಅವಕಾಶ ನೀಡಬಾರದು ಎಂಬ ಮನವಿಯು ಆಂತರಿಕ ಸಚಿವಾಲಯದಿಂದ ಬಂದಿತ್ತು ಎಂದು ಸಾರಿಗೆ ಸಚಿವ ಡನಿಲೊ ಟೊನಿನೆಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಡು ಬಲಪಂಥೀಯ ನಾಯಕ ಮ್ಯಾಟಿಯೊ ಸಾಲ್ವಿನಿ ಆಂತರಿಕ ಸಚಿವರಾಗಿದ್ದಾರೆ. ವಲಸಿಗರನ್ನೊಳಗೊಂಡ ಹಡಗಿಗೆ ಬಂದರು ಪ್ರವೇಶಕ್ಕೆ ಅನುಮತಿ ನೀಡಿದರೆ, ಸಾರ್ವಜನಿಕ ವ್ಯವಸ್ಥೆಗೆ ಭಂಗ ಬರುವುದು ಎಂಬುದಾಗಿ ಆಂತರಿಕ ಸಚಿವಾಲಯ ಹೇಳಿದೆ.

ಅಧಿಕಾರ ಸ್ವೀಕರಿಸಿದ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಆಂತರಿಕ ಸಚಿವ ಸಾಲ್ವಿನಿ ಹಲವಾರು ನೂತನ ನೀತಿಗಳನ್ನು ಜಾರಿಗೆ ತಂದಿದ್ದಾರೆ. ವಲಸಿಗರನ್ನು ಹೊತ್ತು ತರುವ ಸೇವಾ ಹಡಗುಗಳನ್ನು ಬಂದರಿನೊಳಕ್ಕೆ ಬಿಡದಿರಲು ಅವರ ಆಂತರಿಕ ಸಚಿವಾಲಯ ಈಗಾಗಲೇ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News