ಅಮೆರಿಕಕ್ಕೆ ಭಾರತ ಸೆಡ್ಡು: ರಶ್ಯದಿಂದ ಕ್ಷಿಪಣಿ ವ್ಯವಸ್ಥೆ ಖರೀದಿ

Update: 2018-07-01 03:58 GMT

ಹೊಸದಿಲ್ಲಿ, ಜು.1: ಅಮೆರಿಕದ ದಿಗ್ಬಂಧನ ಬೆದರಿಕೆಯನ್ನೂ ಲೆಕ್ಕಿಸದೇ ರಶ್ಯದಿಂದ ಐದು ಅತ್ಯಾಧುನಿಕ ಎಸ್-400 ಟ್ರಿಂಫ್ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತದ ದಿಟ್ಟ ಹೆಜ್ಜೆ ಇಟ್ಟಿದೆ. ನನೆಗುದಿಗೆ ಬಿದ್ದಿದ್ದ 39 ಸಾವಿರ ಕೋಟಿ ರೂಪಾಯಿಯ ಈ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾನ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿ ಮೆಗಾ ಎಸ್-400 ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಾಣಿಜ್ಯ ಮಾತುಕತೆ ವೇಳೆ ಈ ಖರೀದಿ ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. "ಎಸ್-400'' ಖರೀದಿ ಪ್ರಕರಣ ಇದೀಗ ಒಪ್ಪಿಗೆಗಾಗಿ ಹಣಕಾಸು ಸಚಿವಾಲಯದ ಮುಂದೆ ಬರಲಿದ್ದು, ಅಂತಿಮ ಒಪ್ಪಂದಕ್ಕಾಗಿ ಪ್ರಧಾನಿ ನೇತೃತ್ವದ ಸಂಪುಟ ಸಮಿತಿಯ ಮುಂದೆ ಬರಲಿದೆ. ಈ ಕುರಿತ ಒಪ್ಪಂದಕ್ಕೆ ಸಹಿ ಮಾಡುವ ವೇಳೆ ಪ್ರಧಾನಿ ಪರಿಶೀಲನೆ ನಡೆಸುವರು.

ಈ ತಿಂಗಳ 6ರಂದು ವಾಷಿಂಗ್ಟನ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು ಅಮೆರಿಕದ ಮೈಕ್ ಪೊಂಪೆಯೊ ಮತ್ತು ಜಿಮ್ ಮಾಟಿಸ್ ಜತೆ ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು ಅಮೆರಿಕ ದಿಢೀರ್ ಮುಂದಕ್ಕೆ ಹಾಕಿದ ಬೆನ್ನಲ್ಲೇ ಭಾರತ ಈ ನಿರ್ಧಾರ ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಅತ್ಯಾಧುನಿಕ ಎಸ್-400 ಕ್ಷಿಪಣಿ ವ್ಯವಸ್ಥೆಯು 400 ಕಿಲೋಮೀಟರ್ ದೂರದಿಂದ ಹಾಗೂ 30 ಕಿಲೋಮೀಟರ್ ಎತ್ತರದಿಂದ ವಿರೋಧಿ ಪಡೆಯ ಪ್ರಮುಖ ಬಾಂಬರ್, ಯುದ್ಧ ವಿಮಾನ, ಗೂಢಚರ್ಯ ವಿಮಾನ, ಕ್ಷಿಪಣಿ ಹಾಗೂ ಡ್ರೋನ್ ಗಳನ್ನು ಪತ್ತೆ ಮಾಡಿ, ಅವುಗಳ ಜಾಡು ಹಿಡಿದು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಇದು ಭಾರತದ ಮಿಲಿಟರಿ ಬಲವರ್ಧನೆಯಲ್ಲಿ ಹೊಸ ಮೈಲುಗಲ್ಲು ಎನಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News