ಶಿವಸೇನೆಯಿಂದ ಇಂದಿರಾ ಗಾಂಧಿ ಗುಣಗಾನ

Update: 2018-07-02 03:52 GMT

ಮುಂಬೈ, ಜು.2: ತುರ್ತು ಪರಿಸ್ಥಿತಿ ವಿವಾದವನ್ನು ಕೆದಕಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ಎನ್‌ಡಿಎ ಅಂಗಪಕ್ಷವಾದ ಶಿವಸೇನೆ ತರಾಟೆಗೆ ತೆಗೆದುಕೊಂಡಿದೆ. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದರು ಎಂಬ ಕಾರಣಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ಪಕ್ಷದ ಸಂಸದ ಸಂಜಯ್ ರಾವುತ್ ತಿರುಗೇಟು ನೀಡಿದ್ದಾರೆ.

"ಇಂದಿರಾ ಗಾಂಧಿ ಪ್ರಜಾಪ್ರಭುತ್ವದ ಪರವಾಗಿದ್ದರು ಹಾಗೂ ಇದೇ ಕಾರಣಕ್ಕೆ 1977ರಲ್ಲಿ ತುರ್ತು ಪರಿಸ್ಥಿತಿ ಹಿಂಪಡೆದು ಚುನಾವಣೆಗೆ ಮುಂದಾದರು" ಎಂದು ಅವರು ಹೇಳಿದ್ದಾರೆ.

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತಮ್ಮ ಸಾಪ್ತಾಹಿಕ ಅಂಕಣದಲ್ಲಿ, "ರಾಷ್ಟ್ರ ನಾಯಕರಾದ ಜವಾಹರ್ ಲಾಲ್ ನೆಹರೂ, ಮಹಾತ್ಮ ಗಾಂಧೀಜಿ, ಸರ್ದಾರ್ ಪಟೇಲ್, ರಾಜೇಂದ್ರ ಪ್ರಸಾದ್, ಬಿ.ಆರ್.ಅಂಬೇಡ್ಕರ್, ನೇತಾಜಿ ಬೋಸ್ ಮತ್ತು ವೀರ್ ಸಾವರ್ಕರ್ ಅವರಂಥವರ ಕೊಡುಗೆಯನ್ನು ತಿರಸ್ಕರಿಸುವುದು ರಾಷ್ಟ್ರದ್ರೋಹದ ಕ್ರಮವಾಗುತ್ತದೆ" ಎಂದು ಪ್ರತಿಪಾದಿಸಿದ್ದಾರೆ.

"ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಂಥ ಸಾಧನೆಯನ್ನು ಯಾರೂ ಮಾಡಿಲ್ಲ. ತುರ್ತು ಪರಿಸ್ಥಿತಿ ಹೇರಿದ ಒಂದೇ ನಿರ್ಧಾರದಿಂದ ಅವರ ಕೊಡುಗೆಗಳು ಕೊಚ್ಚಿಹೋಗುವುದಿಲ್ಲ. ಪ್ರತಿ ರಾಜಕೀಯ ಪಕ್ಷ ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಕೆಲ ಪ್ರಾಯೋಗಿಕ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಯಾರು ನಿರ್ಧರಿಸಬೇಕು? ತುರ್ತು ಪರಿಸ್ಥಿತಿಯನ್ನು ಮರೆಯಬೇಕು" ಎಂದು ರಾವುತ್ ಹೇಳಿದ್ದಾರೆ.

"ತುರ್ತು ಪರಿಸ್ಥಿತಿ ಹೇರಿದ ದಿನವನ್ನು ಕರಾಳ ದಿನ ಎಂದು ಕರೆಯುವುದಾದರೆ, ಈ ಕೇಂದ್ರ ಸರ್ಕಾರದ ಅವಧಿಯಲ್ಲಿ ಅಂಥ ಹಲವು ಕರಾಳ ದಿನಗಳಿವೆ. ದೇಶದಲ್ಲಿ ಆರ್ಥಿಕ ಅರಾಜಕತೆ ಸೃಷ್ಟಿಸಿದ ನೋಟು ರದ್ದತಿ ದಿನವನ್ನೂ ಕರಾಳ ದಿನವಾಗಿ ಕರೆಯಬೇಕಾಗುತ್ತದೆ" ಎಂದು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News