ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಶೇ.15ರಷ್ಟು ಹಣ ಮೀಸಲಿಡಲು ಒತ್ತಾಯ

Update: 2018-07-02 13:30 GMT

ಬೆಂಗಳೂರು, ಜು. 2: ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ.15ರಷ್ಟು ಮೀಸಲಿಡಬೇಕು. 10ಕ್ಕಿಂತ ಕಡಿಮೆ ಮಕ್ಕಳಿರುವ 3347 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 57 ಹಿರಿಯ ಪ್ರಾಥಮಿಕ ಶಾಲೆಗಳ ದಾಖಲಾತಿ ಹೆಚ್ಚಿಸಿ, ಉಳಿಸಿಕೊಳ್ಳಲು ಕೂಡಲೇ ಈ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿ ಪ್ರಾರಂಭಿಸಬೇಕೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಗ್ರಹಿಸಿದೆ.

ಶಾಲಾಹಂತದಲ್ಲಿ ರಚನೆಯಾಗಿರುವ ಶಾಲಾಭಿವೃದ್ಧಿ-ಮೇಲುಸ್ತುವಾರಿ ಸಮಿತಿಗಳು ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿ ಪರಿವರ್ತಿಸಲು ಶಕ್ತಿ ಮೀರಿ ಕೆಲಸ ನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಶಾಲಾಹಂತದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಎಲ್ಲ 18 ಜನ ಚುನಾಯಿತ ಸದಸ್ಯರಿಗೆ ಮತ್ತು ಉಳಿದ ಪದನಿಮಿತ್ತ ಹಾಗು ನಾಮನಿರ್ದೇಶನ ಸದಸ್ಯರಿಗೆ ಶಾಲಾ ಹಂತದಲ್ಲಿಯೇ ತರಬೇತಿ ನೀಡುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಬೇಕು.

ರಾಜ್ಯದಲ್ಲಿ ಖಾಲಿ ಇರುವ 28,582 ಶಿಕ್ಷಕರ ಹುದ್ದೆಗಳನ್ನು ತುಂಬಲು ಬಜೆಟ್‌ನಲ್ಲಿ ಪ್ರಸ್ತಾಪಿಸಿ ಹಣ ಮೀಸಲಿಡಬೇಕು. ಸೆಪ್ಟೆಂಬರ್ 2017ರಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ರೂಪುರೇಷೆಗಳನ್ನು ರೂಪಿಸಿ, ವರದಿಯಲ್ಲಿನ ಶಿಫಾರಸಿನಂತೆ ಉನ್ನತ ಮಟ್ಟದ ಸಲಹಾ ಸಮಿತಿ ರಚಿಸಬೇಕು. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ, ಶುಲ್ಕ ಮತ್ತು ಮಕ್ಕಳ-ಪಾಲಕರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಲು ವಿಶೇಷ ಕಾನೂನನ್ನು ರೂಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕೆಂದು ವೇದಿಕೆಯ ಮಹಾ ಪೋಷಕರು ಹಾಗೂ ಶಿಕ್ಷಣ ತಜ್ಞ ನಿರಂಜನಾರಾಧ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News