ಗುಂಪುಗಳಿಂದ ಹತ್ಯೆಯಾಗುತ್ತಿರುವ ಕಾನೂನು ವ್ಯವಸ್ಥೆ

Update: 2018-07-03 08:26 GMT

ಇಡೀ ದೇಶ ತಲೆತಗ್ಗಿಸುವಂತಹ ಎರಡು ಭೀಕರ ಘಟನೆಗಳು ಹೊಸದಿಲ್ಲಿಯಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದೆ. ಭಾರತ ವಿಶ್ವಗುರುವಾಗುವ ಕನಸು ಕಾಣುತ್ತಿರುವಾಗಲೇ, ಆ ಹಗಲು ಕನಸನ್ನು ತಟ್ಟಿ ಎಚ್ಚರಿಸುವಂತಿದೆ ಈ ಘಟನೆಗಳು. ಮೊದಲನೆಯ ಘಟನೆ ಈ ದೇಶ ಇನ್ನೂ ಎಂತಹ ಮೌಢ್ಯದಲ್ಲಿ ನರಳುತ್ತಿದೆ ಎನ್ನುವುದನ್ನು ಹೇಳಿದರೆ, ಮತ್ತೊಂದು, ಈ ದೇಶದ ಕಾನೂನು ವ್ಯವಸ್ಥೆ ಎಂತಹ ಬಿಕ್ಕಟ್ಟಿನಲ್ಲಿದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಹೊಸದಿಲ್ಲಿಯಲ್ಲಿ ಏಳು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 11 ಮಂದಿ ಸದಸ್ಯರು ಅತ್ಯಂತ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರೆಲ್ಲರ ದೇಹಗಳೂ ಆತ್ಯಹತ್ಯೆಗೈದ ರೀತಿಯಲ್ಲೇ ಇವೆ. ಅವರು ಆತ್ಮಹತ್ಯೆ ಮಾಡಿದ ರೀತಿ, ಮನೆಯೊಳಗಿನ ಒಟ್ಟು ಸ್ಥಿತಿ ಅತ್ಯಂತ ನಿಗೂಢವಾಗಿದೆ. ಆತ್ಮಹತ್ಯೆ ಮಾಡಿಕೊಂಡವರೆಲ್ಲ ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸಿದ್ದಾರೆ. ಅಷ್ಟೇ ಅಲ್ಲ, ಮೋಕ್ಷ, ತಾಂತ್ರಿಕ ವಿದ್ಯೆ ಇತ್ಯಾದಿಗಳಿಗೆ ಸಂಬಂಧಿಸಿದ ಪುಸ್ತಕಗಳೂ ಅಲ್ಲಿದ್ದವು. ಮೋಕ್ಷಕ್ಕಾಗಿ ಅಥವಾ ವಿಶೇಷ ಶಕ್ತಿಯನ್ನು ತಮ್ಮದಾಗಿಸಿಕೊಳ್ಳಲು ಅವರೆಲ್ಲ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಥವಾ ಅವರಲ್ಲೊಬ್ಬ ಅವರನ್ನೆಲ್ಲ ಕೊಂದು ನೇಣಿಗೇರಿಸಿರಬೇಕು ಎಂದು ಸಂಶಯಿಸಲಾಗಿದೆ.

ಕುಟುಂಬವು ದೇವರ ಮೇಲೆ ಗಾಢ ನಂಬಿಕೆಯನ್ನು ಹೊಂದಿತ್ತು. ಮಾತ್ರವಲ್ಲ, ಪೂಜೆ ಆಚಾರಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿತ್ತು ಎನ್ನುವುದೂ ತನಿಖೆಯ ಸಂದರ್ಭದಲ್ಲಿ ಬಹಿರಂಗವಾಗಿದೆ. ಆ ಕುಟುಂಬ ಅನಕ್ಷರಸ್ಥ ಕುಟುಂಬವೇನೂ ಆಗಿರಲಿಲ್ಲ. ಜಗತ್ತಿನ ಆಗುಹೋಗುಗಳು ತಿಳಿಯದವರೂ ಅಲ್ಲ. ಹೀಗಿದ್ದರೂ ಇಂತಹದೊಂದು ಕೃತ್ಯ ನಡೆದಿರಬೇಕಾದರೆ, ನಮ್ಮ ನಡುವೆ ಮೌಢ್ಯಗಳು ಸದ್ದಿಲ್ಲದೆ ಹಾವಿನಂತೆ ಹರಿದಾಡುತ್ತಿವೆ ಎಂದಾಯಿತು. ವಿದ್ಯಾವಂತರೇ ಈ ಮೌಢ್ಯದ ಹಿಂಬಾಲಕರಾಗಿರುವುದು ಆಧುನಿಕ ಭಾರತದ ಅತಿ ದೊಡ್ಡ ದುರಂತವೆಂದು ನಾವು ತಿಳಿಯಬೇಕಾಗಿದೆ. ಟಿವಿಗಳು ಅತಿಮಾನುಷವಾದ ತಂತ್ರಗಳನ್ನು ಟಿಆರ್‌ಪಿಗಾಗಿ ವಿಶೇಷವಾಗಿ ಪ್ರಸಾರ ಮಾಡುತ್ತಿರುವುದು, ವಾಸ್ತುವಿನ ಹೆಸರಿನಲ್ಲಿ ವಿವಿಧ ಸ್ವಾಮೀಜಿಗಳು ಜನರಲ್ಲಿ ಭಯಭೀತಿಗಳನ್ನು ಬಿತ್ತುವುದು ಇವೆಲ್ಲವೂ ಅಂತಿಮವಾಗಿ ನಮ್ಮನ್ನು ಎತ್ತ ಕಡೆಗೆ ಕೊಂಡೊಯ್ಯಬಹುದು ಎನ್ನುವುದಕ್ಕೆ ಈ ದುರಂತವೇ ಸಾಕ್ಷಿಯಾಗಿದೆ. ದೇವರು, ನಂಬಿಕೆಗಳೇ ಬೇರೆ. ಮೌಢ್ಯಗಳೇ ಬೇರೆ. ಆದರೆ ಇಂದು ಇವೆರಡನ್ನೂ ಕಲಬೆರಕೆಗೊಳಿಸಲಾಗಿದೆ.

ನಂಬಿಕೆಗಳನ್ನು ಬಂಡವಾಳವಾಗಿಸಿ ದಂಧೆ ನಡೆಸಬಹುದು ಎಂದು ತಿಳಿದುಕೊಂಡ ‘ಬುದ್ಧಿವಂತ’ರಿಂದಲೇ ಇದು ಸಂಭವಿಸಿದೆ. ತಿಳಿದೋ, ತಿಳಿಯದೆಯೋ ಈ ದಂಧೆಯಲ್ಲಿ ಮಾಧ್ಯಮಗಳು, ರಾಜಕಾರಣಿಗಳು, ಬೃಹತ್ ಉದ್ಯಮಿಗಳೂ ಪಾಲುದಾರರಾಗಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಈ ನಕಲಿ ದೇವರ ವಕ್ತಾರರನ್ನು ಪೋಷಿಸುತ್ತಿದ್ದಾರೆ. ಮೌಢ್ಯಗಳು ಹೆಚ್ಚಿದಷ್ಟೂ ತಮ್ಮ ಕಾರ್ಯವನ್ನು ಸಾಧಿಸಬಹುದು ಎನ್ನುವುದನ್ನು ಅರಿತುಕೊಂಡಿರುವ ಇವರಿಂದಲೇ ಈ ದೇಶದಲ್ಲಿ ಮಂತ್ರವಾದಿಗಳು, ವಾಸ್ತುಪಂಡಿತರು, ಸ್ವಘೋಷಿತ ದೇವಮಾನವರು ಹುಟ್ಟುತ್ತಿದ್ದಾರೆ. ದೇವರ ನಂಬಿಕೆ ನಮ್ಮನ್ನು ಉಳಿಸಬೇಕು ಮತ್ತು ಬೆಳೆಸಬೇಕು. ಅದು ಯಾವತ್ತೂ ನಮ್ಮ ಅಳಿವಿಗೆ ಕಾರಣವಾಗಬಾರದು. ಮನುಷ್ಯನ ಅಳಿವಿಗೆ ಕಾರಣವಾಗುವ ನಂಬಿಕೆಗಳು ಖಂಡಿತವಾಗಿಯೂ ದೇವರೆಡೆಗೆ ನಮ್ಮನ್ನು ಕೊಂಡೊಯ್ಯಲಾರದು. ಅಂತಹ ಮೌಢ್ಯಗಳಿಗಿಂತ ನಾಸ್ತಿಕವಾದವೇ ವಾಸಿ. ದುರದೃಷ್ಟವಶಾತ್ ಸರಕಾರವಿಂದು ನೇರವಾಗಿ ಈ ಮೌಢ್ಯಗಳ ಜೊತೆಗೆ ಶಾಮೀಲಾಗಿದೆ. ಪ್ರತಿ ರಾಜಕಾರಣಿಗಳೂ ತಮ್ಮ ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸಿಕೊಳ್ಳಲು ಒಬ್ಬೊಬ್ಬ ಸ್ವಾಮೀಜಿಗಳನ್ನು ಬೆನ್ನಿಗೆ ಕಟ್ಟಿಕೊಂಡಿದ್ದಾರೆ.

ಇವರೆಲ್ಲರ ನಂಬಿಕೆಗಳು ಲೌಕಿಕ ಅಧಿಕಾರಕ್ಕಾಗಿಯೇ ಹೊರತು, ದೇವರಿಗೆ ಹತ್ತಿರವಾಗುವುದಕ್ಕೆ ಅಲ್ಲ. ಉತ್ತರ ದಿಲ್ಲಿಯಲ್ಲಿ ನಡೆದಿರುವ ಘಟನೆ ಇವೆಲ್ಲದರ ಪರಿಣಾಮವಾಗಿದೆ. ನಮ್ಮ ವಿದ್ಯೆ, ಶಿಕ್ಷಣ ಜನರನ್ನು ವಿಚಾರವಂತರಾಗಿ ಮಾಡುವಲ್ಲಿ ಹೇಗೆ ವಿಫಲವಾಗಿದೆ ಎನ್ನುವುದಕ್ಕೂ ಇದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಪ್ರಾಣಾರ್ಪಣೆ ಮಾಡುವುದರಿಂದ ಸ್ವರ್ಗ ಸಿಗುತ್ತದೆ ಎಂದು ನಂಬಿ, ಅದನ್ನೇ ಜಿಹಾದ್ ಎಂದು ತಪ್ಪು ತಿಳಿದು ಆತ್ಮಾಹುತಿ ಮಾಡುವವರದೂ ಅಂತಿಮವಾಗಿ ಇದೇ ಮನಃಸ್ಥಿತಿಯಾಗಿದೆ. ಹೇಗೆ ಇಂತಹ ಜಿಹಾದಿಗಳ ವಿರುದ್ಧ ನಮ್ಮ ಕಾನೂನು ವ್ಯವಸ್ಥೆ ಮಾತನಾಡುತ್ತದೆಯೋ ಹಾಗೆಯೇ, ಮಾಟ, ಮಂತ್ರದಂತಹ ಮೌಢ್ಯಗಳ ವಿರುದ್ಧವೂ ಕಾನೂನು ಮಾತನಾಡಬೇಕಾದ ಅಗತ್ಯವಿದೆ ಎನ್ನುವುದನ್ನು ಉತ್ತರದಿಲ್ಲಿಯಲ್ಲಿ ನಡೆದ ವಾಮಾಚಾರ ಪ್ರಕರಣ ತಿಳಿಸಿದೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಮಹಿಳೆಯೊಬ್ಬಳು ದೇವಿಯನ್ನು ಮೆಚ್ಚಿಸುವುದಕ್ಕಾಗಿ ತನ್ನ ನಾಲಗೆಯನ್ನೇ ಕತ್ತರಿಸಿಕೊಂಡಿದ್ದಳು. ಆಕೆಯ ಮನಸ್ಸಿಗೆ ಅಂತಹದೊಂದು ನಂಬಿಕೆಯನ್ನು ತುಂಬಿದವರು ಯಾರು ಎನ್ನುವುದನ್ನು ಪತ್ತೆ ಹಚ್ಚಿ ಶಿಕ್ಷಿಸದೇ ಇದ್ದರೆ ಇಂತಹ ಜನರ ಸಂಖ್ಯೆ ನಮ್ಮ ನಡುವೆ ಹೆಚ್ಚುತ್ತಲೇ ಹೋಗುತ್ತದೆ. ಮೌಢ್ಯದ ವಿರುದ್ಧ ವಿಚಾರವಾದಿಗಳು ಹೋರಾಡುತ್ತಲೇ ಬಂದಿದ್ದಾರಾದರೂ ಕೇಂದ್ರ ಸರಕಾರ ಇದನ್ನು ಈವರೆಗೆ ಗಂಭೀರವಾಗಿ ತೆಗೆದುಕೊಂಡಿಲ್ಲ.

ಸ್ವಘೋಷಿತ ದೇವರ ಹೆಸರಿನಲ್ಲಿ ಆಶ್ರಮ ನಡೆಸಿ ಅಕ್ರಮ ದಂಧೆ, ಅತ್ಯಾಚಾರಗಳನ್ನು ಮಾಡುವ ಸ್ವಾಮೀಜಿಗಳ ಹೆಸರು ಒಂದೊಂದಾಗಿ ಬಯಲಾಗುತ್ತಿದೆಯಾದರೂ, ಇದು ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಸರಕಾರ ಸಿದ್ಧವಿಲ್ಲ. ಯಾಕೆಂದರೆ, ಸ್ವತಃ ಸರಕಾರವೇ ಇಂತಹ ಕಪಟ ಸ್ವಾಮೀಜಿಗಳ, ಮಂತ್ರವಾದಿಗಳ ಕೈಯಲ್ಲಿ ನರಳುತ್ತಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂಬ ಅನುಮಾನದಲ್ಲಿ ಐವರನ್ನು ಸಾರ್ವಜನಿಕರೇ ಥಳಿಸಿ ಕೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗುಂಪಿನಿಂದ ಹತ್ಯೆಗಳ ಪ್ರಕರಣ ಹೆಚ್ಚುತ್ತಿವೆ. ವಾಟ್ಸ್‌ಆ್ಯಪ್‌ಗಳು ಹರಡುತ್ತಿರುವ ವದಂತಿಗಳಿಗೆ ಹೆದರಿ ಸಾರ್ವಜನಿಕರು ಇಂತಹ ಕೃತ್ಯಗಳು ಎಸಗುವುದು ಒಂದೆಡೆಯಾದರೆ, ಮಗದೊಂದೆಡೆ ಇಂತಹ ಗುಂಪು ಹತ್ಯೆಗಳಲ್ಲಿ ದುಷ್ಕರ್ಮಿಗಳ ಪಾತ್ರ ದೊಡ್ಡದಿರುತ್ತದೆ. ಇಂದು ಬೀದಿಬೀದಿಗಳಲ್ಲಿ ಪರ್ಯಾಯ ಪೊಲೀಸರಂತೆ ಹುಟ್ಟಿಕೊಂಡಿರುವ ಗೋರಕ್ಷಕರೇ ಈ ಗುಂಪು ನರಮೇಧಗಳಿಗೆ ಸ್ಫೂರ್ತಿಯಾಗಿದ್ದಾರೆ. ಆರಂಭದಲ್ಲಿ ಗೋಸಾಗಾಟಗಾರರನ್ನು ಗುರಿ ಮಾಡಿ ಇಂತಹ ದಾಳಿಗಳಾಗುತ್ತಿದ್ದವು. ಗುಂಪಿನಿಂದ ನಡೆದ ಹಲ್ಲೆಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. ಇದೀಗ ದನಗಳ್ಳರ ಬದಲಿಗೆ ಮಕ್ಕಳ ಕಳ್ಳರ ಹೆಸರಿನಲ್ಲಿ ಗುಂಪುಗಳಿಂದ ಹತ್ಯೆಗಳು ನಡೆಯುತ್ತಿವೆ.

ಕಾನೂನು ವ್ಯವಸ್ಥೆಯ ದೌರ್ಬಲ್ಯಗಳನ್ನು ಬಳಸಿಕೊಂಡು ಇಂತಹ ಗುಂಪು ಹತ್ಯೆಗಳು ನಡೆಯುತ್ತಿವೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಅನೇಕ ಸಂದರ್ಭಗಳಲ್ಲಿ ಜನರ ಮನದೊಳಗಿರುವ ಜನಾಂಗೀಯವಾದವೇ ಇಂತಹ ಹತ್ಯೆಗಳಿಗೆ ಕಾರಣವಾಗುತ್ತದೆ. ವಲಸೆ ಕೂಲಿ ಕಾರ್ಮಿಕರೇ ಇಂತಹ ಹಲ್ಲೆಗಳ ನೇರ ಗುರಿಯಾಗಿದ್ದಾರೆ. ಈ ಕಾರ್ಮಿಕರಲ್ಲಿ ಬಹುಪಾಲು ದಲಿತರೇ ಆಗಿದ್ದಾರೆ ಎನ್ನುವುದು ಕೂಡ ಗಮನಿಸಬೇಕು. ಗುಂಪಾಗಿ ಒಬ್ಬನನ್ನು ಕೊಂದು ಹಾಕಿದರೆ, ಕಾನೂನಿನ ಕೈಯಿಂದ ಸುಲಭವಾಗಿ ಪಾರಾಗಬಹುದು ಎನ್ನುವ ಅರಿವಿನಿಂದಲೇ ಗುಂಪು ಹತ್ಯೆ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ. ಒಂದೆಡೆ ವೌಢ್ಯ, ನಂಬಿಕೆಗಳ ಹೆಸರಿನಲ್ಲಿ ಜನರು ಬಲಿಯಾಗುತ್ತಿದ್ದರೆ; ಮಗದೊಂದೆಡೆ ಬೀದಿಯಲ್ಲಿರುವ ಗೂಂಡಾಗಳು, ಪುಡಿ ರೌಡಿಗಳು ‘ಯಾರು ಗೋಕಳ್ಳರು, ಯಾರು ಮಕ್ಕಳ ಕಳ್ಳರು’ ಎನ್ನುವುದನ್ನು ಗುರುತಿಸಿ ತಮ್ಮ ತೀರ್ಪನ್ನು ನೀಡುತ್ತಿದ್ದಾರೆ. ಇಂತಹ ಸಾವುಗಳು ಇತ್ತೀಚಿನ ದಿನಗಳಲ್ಲಿ ತೀವ್ರವಾಗುತ್ತಿರುವುದಕ್ಕೆ ಗೃಹ ಇಲಾಖೆಯನ್ನೇ ಹೊಣೆ ಮಾಡಬೇಕಾಗಿದೆ. ಕೇಂದ್ರ ಗೃಹ ಸಚಿವರು ಈ ಬಗ್ಗೆ ಬಾಯಿ ತೆರೆಯದೇ ಇದ್ದರೆ, ಪೊಲೀಸರೂ ಈ ಗುಂಪುಗಳ ಕೈಯಲ್ಲಿ ಸಿಕ್ಕಿ ಸಾಯಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News