ಮೂರು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಜೆಡಿಯು ಹೋರಾಟ

Update: 2018-07-03 04:03 GMT

ಹೊಸದಿಲ್ಲಿ, ಜು.3: ಬಿಜೆಪಿ ಆಡಳಿತದ ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ವಿಧಾನಸಭೆಗಳಿಗೆ ವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ(ಜೆಡಿಯು) ನಿರ್ಧರಿಸುವುದರೊಂದಿಗೆ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಭೇಟಿಗೆ ಸಿದ್ಧತೆಗಳು ನಡೆದಿರುವ ಬೆನ್ನಲ್ಲೇ ನಿತೀಶ್ ನಿರ್ಧಾರ ಅಚ್ಚರಿ ಮೂಡಿಸಿದೆ. ಇದರಿಂದ ಉಭಯ ಗಣ್ಯರ ಭೇಟಿಯ ಮೇಲೆ ತೂಗುಗತ್ತಿ ನೇತಾಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ಸ್ಥಾನ ಹೊಂದಾಣಿಕೆ ಬಗ್ಗೆಯೂ ಅನುಮಾನ ಕಾಡಲಾರಂಭಿಸಿದೆ.

ಈ ರಾಜ್ಯಗಳಲ್ಲಿ ಜೆಡಿಯು ಪ್ರಭಾವ ಅಷ್ಟೇನೂ ದಟ್ಟವಾಗಿಲ್ಲವಾದರೂ, ಮುಂದಿನ ಲೋಕಸಭಾ ಚುನಾವಣೆಗೆ ತಾಲೀಮು ಎನಿಸಿರುವ ಈ ರಾಜ್ಯಗಳ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಬಿಹಾರದಲ್ಲಿ ನ್ಯಾಯಸಮ್ಮತ ಸೀಟುಗಳಿಗೆ ಬೇಡಿಕೆ ಇಟ್ಟಿರುವ ಜೆಡಿಯು ಈ ಮೂಲಕ ಬಿಜೆಪಿ ವಿರುದ್ಧ ಒತ್ತಡ ತಂತ್ರ ಅನುಸರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಿಝೋರಾಂ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಮೂಲಕ ಜೆಡಿಯು ತನ್ನ ತಳಮಟ್ಟವನ್ನು ಮತ್ತೆ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ ಎಂದು ನಿತೀಶ್ ಘೋಷಿಸಿದ್ದಾರೆ. ಸಮಾಜವಾದಿ ನಾಯಕ ರಾಮ್‌ಮನೋಹರ್ ಲೋಹಿಯಾ ಅವರ ಪ್ರಬಲ ಛಾಪು ಇದ್ದ ಈ ರಾಜ್ಯಗಳಲ್ಲಿ ಅವರ ಚಿಂತನೆಯನ್ನು ಮುಂದುವರಿಸಿಕೊಂಡು ಹೋಗುವುದು ಪಕ್ಷದ ಉದ್ದೇಶ ಎಂದು ಜೆಡಿಯು ಸ್ಪಷ್ಟಪಡಿಸಿದೆ.

ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲೂ ಪ್ರಸಾದ್ ಅವರು ಸಮಾಜವಾದಿ ಕಾರ್ಯಸೂಚಿಯಿಂದ ವಿಮುಖವಾಗಿರುವ ಹಿನ್ನೆಲೆಯಲ್ಲಿ ನಿತೀಶ್ ಇದನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News