ಬ್ರೆಝಿಲ್ ಬಾಲಕನ ವಿಡಿಯೋ ಪೋಸ್ಟ್ ಮಾಡಿ ನಗೆಪಾಟಲಿಗೀಡಾದ ಕೇಂದ್ರ ಸಚಿವ ರಿಜಿಜು

Update: 2018-07-03 10:26 GMT

ಬೆಂಗಳೂರು, ಜು.3: ತಮ್ಮನ್ನು ಫುಟ್ಬಾಲ್ ಅಭಿಮಾನಿಯೆಂದೇ ಗುರುತಿಸಿಕೊಳ್ಳುತ್ತಿರುವ ಕೇಂದ್ರ ಗೃಹ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ಮಗುವೊಂದು ಫುಟ್ಬಾಲ್ ಆಡುತ್ತಿರುವ ವೀಡಿಯೋ ಪೋಸ್ಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲಾರಂಭಿಸಿದ್ದರಿಂದ ಈಗ ಯುವಜನತೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಭಾರತ ಕಳೆದ ವರ್ಷ ಮೊತ್ತ ಮೊದಲ ಬಾರಿಗೆ ಫಿಫಾ  ಅಂಡರ್ 17 ವಿಶ್ವ ಕಪ್ ಪಂದ್ಯಾವಳಿ ಆಯೋಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ ಸಚಿವರು ಪೋಸ್ಟ್ ಮಾಡಿದ್ದ ವೀಡಿಯೋ ಮಾತ್ರ ಬ್ರೆಝಿಲ್ ನ ಏಳು ವರ್ಷದ ಬಾಲಕ ಮಾರ್ಕೋ ಆಂಟೋನಿಯೋದ್ದಾಗಿತ್ತು. ಈ ವೀಡಿಯೋವನ್ನು ಮೂಲತ: ಆಂಟೋನಿಯೋ ಇನ್‍ಸ್ಟಾಗ್ರಾಂ ಪುಟದಲ್ಲಿ ಮಾರ್ಚ್ 10ರಂದು ಕಾಣಿಸಿಕೊಂಡಿತ್ತಲ್ಲದೆ 2 ಲಕ್ಷಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ.

ರಿಜಿಜು ಅವರ ಟೈಮ್ ಲೈನ್ ನಲ್ಲಿದ್ದ ವಿಡಿಯೋ ಇದೀಗ ಡಿಲಿಟ್ ಆಗಿದ್ದು, 2000 ಮಂದಿ ರಿಟ್ವೀಟ್ ಹಾಗೂ & 7000 ಮಂದಿ ಲೈಕ್ ಒತ್ತಿದ್ದಾರೆ.

ರಿಜಿಜು ಪೋಸ್ಟ್ ಮಾಡಿದ ಈ ವೀಡಿಯೋದಲ್ಲಿ ಕಾಣಿಸಿಕೊಂಡ ಬಾಲಕ ಕಳೆದ ವರ್ಷ ಇಂಟರ್ನೆಟ್ ಸೆನ್ಸೇಶನ್ ಆಗಿದ್ದ. ಆತನ ತಂದೆ ಆತನ ವೀಡಿಯೋಗಳನ್ನು ಆನ್ ಲೈನ್ ಪೋಸ್ಟ್ ಮಾಡಲಾರಂಭಿಸಿದ ನಂತರ ಈತ ಪ್ರಸಿದ್ಧಿ ಗಳಿಸಿದ್ದ. ಈಗ ಆತನ ಇನ್‍ಸ್ಟಾಗ್ರಾಂ ಪುಟ ಬಹಳಷ್ಟು ಜನಪ್ರಿಯವಾಗಿದ್ದು  1.2 ಕೋಟಿ ಜನರು ಅದರ ಪೋಸ್ಟ್ ಗಳನ್ನು ಓದುತ್ತಿದ್ದರೆ, ಈ ಪುಟಕ್ಕೆ 2.20 ಲಕ್ಷ ಫಾಲೋವರ್ಸ್ ಇದ್ದಾರೆ. ಬಾಲಕನನ್ನು 'ಭವಿಷ್ಯದ ನೇಮರ್' ಎಂದೇ ಕರೆಯಲಾಗುತ್ತಿದ್ದು ಆತ ಬ್ರೆಝಿಲ್ ಫುಟ್ಬಾಲ್ ತಾರೆ ನೇಮರ್ ಹಾದಿಯಲ್ಲೇ ಮುನ್ನಡೆಯಲಿದ್ದಾನೆ ಎಂದು ಹೇಳಲಾಗುತ್ತಿದೆ. ಬಾಲಕನಿಗೆ ಕರುಳಿನ ಸಮಸ್ಯೆಯಾದ ಕ್ರೋಹ್ನ್ ಕಾಯಿಲೆಯಿದ್ದರೂ ಆತ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಕ್ಲಬ್ ಗಳ ಗಮನ ಸೆಳೆದಿದ್ದಾನೆ.

ರಷ್ಯಾದಲ್ಲಿ ಫಿಫಾ ಕಪ್ ವಿಶ್ವ ಫುಟ್ಬಾಲ್ ಪಂದ್ಯಾವಳಿ ಆರಂಭಗೊಂಡಂದಿನಿಂದ ಕೇಂದ್ರ ಸಚಿವ ರಿಜಿಜು ಫುಟ್ಬಾಲ್ ಬಗ್ಗೆ ಟ್ವೀಟ್ ಮಾಡುತ್ತಾ ಇದ್ದಾರೆ. ನೈತಿಕ ತಳಹದಿಯಲ್ಲಿ ತಾನು  ಪಂದ್ಯಾವಳಿಯಲ್ಲಿ ನಾಕೌಟ್ ಹಂತ ತಲುಪಿದ ಏಕೈಕ ಏಷ್ಯನ್ ತಂಡವಾದ ಜಪಾನ್ ತಂಡವನ್ನು ಬೆಂಬಲಿಸುವುದಾಗಿಯೂ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News