ಚಿತ್ರೀಕರಣಕ್ಕೆ ಅನುಮತಿ: ಏಕಗವಾಕ್ಷಿ ಪದ್ಧತಿ ಜಾರಿಗೆ ತಾರಾ ಅನುರಾಧ ಒತ್ತಾಯ

Update: 2018-07-03 18:30 GMT

ಬೆಂಗಳೂರು, ಜು.3: ಯಶವಂತಪುರದ ಮೈಸೂರು ಲ್ಯಾಂಪ್ಸ್ ಮತ್ತು ಮಿನರ್ವ ಮಿಲ್ ಆವರಣದಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಸ್ಟುಡಿಯೋ ಫ್ಲೋರ್ ನಿರ್ಮಾಣ ಮಾಡಬೇಕು. ನಿರ್ಮಾಪಕರು ಎದುರಿಸುತ್ತಿರುವ ಸಂಕಷ್ಟಗಳನ್ನು ದೂರ ಮಾಡಲು ಸರಕಾರ ಅವರ ನೆರವಿಗೆ ಬರಬೇಕು, ಚಿತ್ರೀಕರಣಕ್ಕಾಗಿ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಒತ್ತಾಯಿಸಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕನ್ನಡ ಚಿತ್ರೋದ್ಯಮ ಎದುರಿಸುತ್ತಿರುವ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಚಿತ್ರೋದ್ಯಮದ ನೆರವಿಗೆ ಸರಕಾರ ಬಾರದಿದ್ದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಹೆಸರಘಟ್ಟದಲ್ಲಿ ಚಿತ್ರನಗರಿ ನಿರ್ಮಿಸಲು ಮುಂದಾದರು. ನಂತರ ಸಿದ್ದರಾಮಯ್ಯ ಅವರು ಮೈಸೂರಿನ ಹತ್ತಿರ ಚಿತ್ರನಗರಿ ನಿರ್ಮಾಣ ಮಾಡುವುದಾಗಿ ಪ್ರಕಟಿಸಿದರು. ಆದರೆ ಎರಡು ಯೋಜನೆಗಳು ಕಾರ್ಯರೂಪಕ್ಕೆ ಬರಲೇ ಇಲ್ಲ. ಈಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ಚಿತ್ರನಗರಿ ನಿರ್ಮಿಸುವ ಆಸಕ್ತಿ ತೋರಿದ್ದಾರೆ. ಕೇವಲ ಬಜೆಟ್‌ಗಳಲ್ಲಿ ಸಿನಿಮಾ ತೋರಿಸುವುದನ್ನು ಬಿಟ್ಟು ಚಿತ್ರನಗರಿ ನಿರ್ಮಾಣ ಮಾಡಲಿ ಎಂದು ಒತ್ತಾಯಿಸಿದರು.

ನಿರ್ಮಾಪಕರು ಅನ್ನದಾತರು ಎನ್ನಲಾಗುತ್ತದೆ. ಆದರೆ ಅವರೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಯಾಟಲೈಟ್ ಬಾಡಿಗೆ ಶೇ.ನೂರರಷ್ಟು ಹೆಚ್ಚಾಗಿದೆ. ಇದನ್ನು ಶೇ. 50ಕ್ಕೆ ಇಳಿಸಬೇಕು. ಒಂದು ಚಿತ್ರದ ಪ್ರಿಂಟ್‌ಗೆ ಅಪ್‌ಲೋಡ್‌ಗೆ ಚೆನ್ನೈ ನಗರಕ್ಕೆ ಹೋಗಬೇಕು. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಿದೆ. ಅದಕ್ಕಾಗಿ ಬೆಂಗಳೂರು ನಗರದಲ್ಲೇ ಇಂತಹದೊಂದು ಘಟಕವನ್ನು ಸ್ಥಾಪಿಸಬೇಕು ಎಂದು ಆಗ್ರಪಡಿಸಿದರು.

ಸಿನಿಮಾ ಮಂದಿರಗಳಿಗೆ ಒಂದು ವಾರದ ಮುಂಗಡ ಬಾಡಿಗೆ 4 ರಿಂದ 5 ಲಕ್ಷ ತೆರಬೇಕಾಗಿದೆ. ಇದನ್ನು ಶೇಕಡವಾರು ರೂಪಕ್ಕೆ ಬದಲಿಸಲು ಸರಕಾರ ಗಮನಹರಿಸಬೇಕು. ಮೊದಲೆಲ್ಲಾ ಚಿತ್ರಮಂದಿರ ಮಾಲಕರು ತಮ್ಮ ಚಿತ್ರಮಂದಿರದಲ್ಲೇ ಚಿತ್ರ ಬಿಡುಗಡೆಗಾಗಿ ನಿರ್ಮಾಪಕರನ್ನು ಗೋಗರೆಯುತ್ತಿದ್ದರು. ಆದರೆ ಇಂದು ನಿರ್ಮಾಪಕರೇ ಮುಂಗಡ ಬಾಡಿಗೆ ಕಟ್ಟಿ ಚಿತ್ರ ಬಿಡುಗಡೆಗೆ ಗೋಗರೆಯುವ ಪರಿಸ್ಥಿತಿ ಎದುರಾಗಿದೆ. ಆದರೂ ಸಿನಿಮಾ ಬಿಡುಗುಡೆ ಮಾಡಲು ಚಿತ್ರಮಂದಿರಗಳೇ ಸಿಗುತ್ತಿಲ್ಲ ಎಂದರು.

ಸಮಗ್ರ ಚಲನಚಿತ್ರ ನೀತಿ ಜಾರಿಗೆ
ಕನ್ನಡ ಚಲನಚಿತ್ರರಂಗವು ಕರ್ನಾಟಕದಲ್ಲಿ ಸದೃಢವಾಗಿ ನೆಲೆಯೂರಬೇಕೆಂಬ ನಿಟ್ಟಿನಲ್ಲಿ ಕನ್ನಡ ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಸಹಾಯಧನ, ಪ್ರಶಸ್ತಿ, ಪುರಸ್ಕಾರ, ಮುಖ್ಯ ಯೋಜನಾಕ್ರಮಗಳನ್ನು ಪುರಸ್ಕರಿಸಿ ಕನ್ನಡ ಚಲನಚಿತ್ರ ನೀತಿ-2011ನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಸಮಗ್ರ ಚಲನಚಿತ್ರ ನೀತಿ ಜಾರಿಗೆ ತರಲಾಗುವುದು.
-ಡಾ.ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News