ಬರಿದಾಗುತ್ತಿರುವ ಅಂತರ್ಜಲ

Update: 2018-07-05 05:42 GMT

ಇನ್ನು ಕೇವಲ ಎರಡು ವರ್ಷಗಳಲ್ಲಿ ಅಂದರೆ 2020ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ 21 ನಗರಗಳಲ್ಲಿ ಅಂತರ್ಜಲ ಸಂಪೂರ್ಣ ಬರಿದಾಗುತ್ತದೆ ಎಂದು ಕೇಂದ್ರ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ‘ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ’ ಎಚ್ಚರಿಕೆ ನೀಡಿದೆ. ಬೆಂಗಳೂರು ಮಾತ್ರವಲ್ಲದೇ, ದಿಲ್ಲಿ, ಚೆನ್ನೈ, ಹೈದರಾಬಾದ್ ಮುಂತಾದ ಮಹಾನಗರಗಳು ಈ ಪಟ್ಟಿಯಲ್ಲಿವೆ. ಒಟ್ಟಾರೆ ದೇಶದ ಬಹುತೇಕ ಕಡೆ ಅಂತರ್ಜಲ ಸಂಪೂರ್ಣ ಬತ್ತಿ ಹೋಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬರಿದಾಗುತ್ತಿರುವ ಅಂತರ್ಜಲದ ಮರುಪೂರಣಕ್ಕೆ ಕ್ರಮಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ ಎಂದು ಜಲ ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಸರಕಾರ ಕೂಡಾ ಈ ಎಚ್ಚರಿಕೆಗೆ ಸ್ಪಂದಿಸಿ ಅಂತರ್ಜಲದ ಮರುಪೂರಣಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಮಳೆ ಕೊಯ್ಲು ಕಡ್ಡಾಯದಂತಹ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.

ವರ್ಷದಿಂದ ವರ್ಷಕ್ಕೆ ಅಂತರ್ಜಲದ ಪ್ರಮಾಣ ಕಡಿಮೆಯಾಗುತ್ತಲೇ ಇದೆ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಕೇವಲ ಮಹಾನಗರಗಳು ಮಾತ್ರವಲ್ಲ ದೇಶದ ಅನೇಕ ಹಳ್ಳಿ ಪಟ್ಟಣಗಳಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ. ಆದರೆ, ಈ ಪ್ರಮಾಣ ಮಹಾನಗರಗಳಲ್ಲಿ ಮಾತ್ರ ಹೆಚ್ಚಾಗಿದೆ. ಇತರ ಪ್ರದೇಶಗಳಲ್ಲಿ ಸರಕಾರ ಕೈಗೊಂಡ ಕ್ರಮಗಳಿಂದಾಗಿ ಅಂತರ್ಜಲದ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಮಹಾ ನಗರಗಳಲ್ಲಿ ಮಾತ್ರ ಪರಿಸ್ಥಿತಿ ಆತಂಕಕಾರಿಯಾಗಿದೆ. ಮಹಾನಗರಗಳಲ್ಲಿ ಅಂತರ್ಜಲ ಪ್ರಮಾಣ ಕುಸಿತಕ್ಕೆ ಕಾರಣವೇನು ಎಂಬ ಬಗ್ಗೆ ಈಗ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ. ನಗರ ಪ್ರದೇಶಗಳಲ್ಲಿ ಗಿಡ, ಮರಗಳನ್ನು ಕಡಿದು ಹಾಕುವುದು ಹಾಗೂ ಕಾಂಕ್ರಿಟ್‌ಮಯವಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಕಾಂಕ್ರಿಟ್ ಕಾಡಾಗುತ್ತಿರುವ ನಗರಗಳಲ್ಲಿ ನೀರು ಇಂಗುವುದಕ್ಕೆ ಜಾಗವೇ ಸಿಗುತ್ತಿಲ್ಲ. ಈ ಮುಂಚೆ ಇದ್ದ ಕೆರೆಗಳೆಲ್ಲ ಒತ್ತುವರಿಯಾಗಿವೆ. ಇನ್ನುಳಿದ ಕೆಲವು ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ.

ಬೆಂಗಳೂರು ಮಹಾನಗರದಲ್ಲಿ ಒಂದು ಕಾಲದಲ್ಲಿ 500ಕ್ಕೂ ಹೆಚ್ಚು ಕೆರೆಗಳಿದ್ದವು. ಈಗ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಇದರ ಪರಿಣಾಮವಾಗಿ ಅಂತರ್ಜಲ ಬತ್ತಿಹೋಗುತ್ತಿದೆ. ಮುಂಚೆ ಬೆಂಗಳೂರು ಮಹಾನಗರದ ಜನಸಂಖ್ಯೆ 30 ಲಕ್ಷವಿದ್ದಾಗ ನಗರದ ನೀರಿನ ಅಗತ್ಯವನ್ನು ಕೆರೆಗಳೇ ಪೂರೈಸುತ್ತಿದ್ದವು. ಆದರೆ ನಗರ ಬೆಳೆಯುತ್ತಾ ಬಂದಂತೆ ಕೆರೆಗಳು ಒತ್ತುವರಿಯಾಗುತ್ತಾ ಬಂದವು. ಕೆರೆಗಳ ಸಮಾಧಿಯ ಮೇಲೆ ಹೊಸ ಬಡಾವಣೆಗಳು ತಲೆ ಎತ್ತಿದವು. ಹೀಗಾಗಿ ಬೆಂಗಳೂರು ಸೇರಿದಂತೆ ಬಹುತೇಕ ಮಹಾನಗರಗಳಿಗೆ ಹೊರಗಿನ ಜಲಾಶಯಗಳಿಂದ ನೀರನ್ನು ಪೂರೈಕೆ ಮಾಡುವ ಸ್ಥಿತಿ ಉಂಟಾಗಿದೆ. ಈಗ ಬೆಂಗಳೂರಿಗೆ ಕಾವೇರಿ ನೀರು ಸಾಲದೆ ದೂರದ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ತರುವ ಮಾತು ಕೇಳಿ ಬರುತ್ತಿದೆ. ಸರಕಾರದ ಮಟ್ಟದಲ್ಲಿ ಈ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಮಲೆನಾಡಿನಲ್ಲಿ ಇದಕ್ಕೆ ತೀವ್ರವಾದ ವಿರೋಧ ಇದೆ. ಇದನ್ನು ಪ್ರತಿಭಟಿಸಿ ಸಾಗರ ಮುಂತಾದ ಕಡೆ ಅಲ್ಲಿನ ಜನ ಚಳವಳಿ ನಡೆಸಿದ್ದಾರೆ. ಸರಕಾರ ಎತ್ತಿನ ಹೊಳೆ ಯೋಜನೆ ರೂಪಿಸಿದಾಗಲೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.

ನಗರ ಪ್ರದೇಶಗಳಲ್ಲಿ ಅಂತರ್ಜಲ ಬತ್ತಿ ಹೋಗಲು ಇನ್ನೊಂದು ಮುಖ್ಯ ಕಾರಣವೆಂದರೆ ಒಂದೆಡೆ ಕೆರೆಗಳನ್ನು ನಾಶ ಮಾಡುವುದರೊಂದಿಗೆ ಇನ್ನೊಂದೆಡೆ ಕೊಳವೆ ಬಾವಿಗಳ ಸಂಖ್ಯೆ ಪ್ರತೀ ವರ್ಷ ಹೆಚ್ಚುತ್ತಿರುವುದಾಗಿದೆ. ಕೊಳವೆ ಬಾವಿಗಳು ಹೆಚ್ಚಿದಷ್ಟು ಅಂತರ್ಜಲ ಬರಿದಾಗುತ್ತಿದೆ. ಬಹುತೇಕ ಕಡೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಕೊಳವೆ ಬಾವಿಗಳು ಬತ್ತಿ ಹೋದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಂದೂವರೆ ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಗೋಚರಿಸುತ್ತಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ. ನೀತಿ ಆಯೋಗದ ವರದಿಗಳ ಪ್ರಕಾರ ಕರ್ನಾಟಕವು ಕೊಳವೆ ಬಾವಿ ಮರು ಪೂರಣ ಹಾಗೂ ಅಂತರ್ಜಲ ಮರುಪೂರಣದಲ್ಲಿ ದೇಶದಲ್ಲೇ ಅತ್ಯಂತ ಹಿಂದುಳಿದ ರಾಜ್ಯವಾಗಿದೆ. ದೇಶಾದ್ಯಂತ ಕೊಳವೆ ಬಾವಿಗಳನ್ನು ಮರುಪೂರಣಗೊಳಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಛತ್ತೀಸ್‌ಗಡ ರಾಜ್ಯ ಬಳಸಿಕೊಂಡು ತನ್ನಲ್ಲಿರುವ ಶೇ.100ರಷ್ಟು ಕೊಳವೆ ಬಾವಿಗಳನ್ನು ಮರುಪೂರಣಗೊಳಿಸಿದೆ. ತೆಲಂಗಾಣ ರಾಜ್ಯ ಶೇ.90ರಷ್ಟು ಕೊಳವೆ ಬಾವಿಗಳನ್ನು ಮರುಪೂರಣಗೊಳಿಸಿದೆ ಹಾಗೂ ಜಾರ್ಖಂಡ್ ರಾಜ್ಯ ಶೇ.50 ಕೊಳವೆ ಬಾವಿಗಳನ್ನು ಮರುಪೂರಣಗೊಳಿಸಿದೆ. ಅಂತರ್ಜಲ ಪ್ರಮಾಣವನ್ನು ಕಾಪಾಡಿಕೊಳ್ಳುವಲ್ಲಿ ಕರ್ನಾಟಕ ರಾಜ್ಯ ಹಿಂದುಳಿದಿರುವುದು ಆತಂಕಕಾರಿ ಸಂಗತಿಯಾಗಿದೆ.

ನಮ್ಮ ರಾಜ್ಯದಲ್ಲಿ ಶೇ.6ರಷ್ಟು ಕೊಳವೆ ಬಾವಿಗಳನ್ನು ಮಾತ್ರ ಮರುಪೂರಣಗೊಳಿಸಲಾಗಿದೆ. ಇದು ಸರಕಾರದ ನಿರ್ಲಕ್ಷವೆಂದರೆ ತಪ್ಪ್ಪಲ್ಲ. ಬೆಂಗಳೂರು ಹಾಗೂ ಇತರ ಮಹಾನಗರಗಳಲ್ಲಿ ಆಯಾ ನಗರ ಪಾಲಿಕೆಗಳು ಮಳೆ ಕೊಯ್ಲು ಪದ್ಧತಿಯನ್ನು ಕಡ್ಡಾಯಗೊಳಿಸಿವೆೆ. ಆದರೆ ಅವು ಸರಿಯಾಗಿ ಜಾರಿಯಾಗಿಲ್ಲ. ಮಳೆಕೊಯ್ಲು ಪದ್ಧತಿ ಸರಿಯಾಗಿ ಜಾರಿಯಾಗಿದ್ದರೆ ಅಂತರ್ಜಲ ಪ್ರಮಾಣ ಈ ರೀತಿ ಬತ್ತಿ ಹೋಗುತ್ತಿರಲಿಲ್ಲ. ಸರಕಾರವೇನೋ ಕಾನೂನನ್ನು ಮಾಡುತ್ತದೆ. ಆದರೆ, ಆ ಕಾನೂನುಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಅಧಿಕಾರಿಗಳು ಕಾನೂನು ಜಾರಿಯ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಇದರಿಂದಾಗಿ ಸರಕಾರ ಎಷ್ಟೇ ಯೋಜನೆಗಳನ್ನು ರೂಪಿಸಿದರೂ ಅಂತರ್ಜಲ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿಲ್ಲ. ಮಳೆ ಕೊಯ್ಲುನ್ನು ಕೇವಲ ಮನೆಗಳಲ್ಲಿ ಮಾಡಿದರೆ ಸಾಲದು. ಸಾರ್ವಜನಿಕ ಸ್ಥಳಗಳಲ್ಲೂ ನೀರು ನೈಸರ್ಗಿಕವಾಗಿ ಇಂಗಿ ಹೋಗಲು ಹಾಗೂ ಕೃತಕವಾಗಿ ಮಳೆಕೊಯ್ಲಿನ ಮೂಲಕ ನೀರನ್ನು ಇಂಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಫುಟ್‌ಪಾತ್‌ಗಲ್ಲಿ ನೀರನ್ನು ಇಂಗಿಸುವ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಾಸ್ತವವಾಗಿ ಇಡೀ ಜಗತ್ತಿನಲ್ಲೇ ಜಲಕ್ಷಾಮದ ಭೀತಿ ಉಂಟಾಗಿದೆ. ಆದರೆ, ನಮ್ಮ ದೇಶದಲ್ಲಿ ಮುಂಗಾರು ಮಾರುತಗಳು ವರವಾಗಿ ಬಂದಿವೆ. ಆದ್ದರಿಂದ ಮಳೆ ನೀರನ್ನು ಬಳಸಿಕೊಂಡು ಅಂತರ್ಜಲದ ಪ್ರಮಾಣವನ್ನು ಹೆಚ್ಚಿಸಲು ಸರಕಾರ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಸರಕಾರೇತರ ಸಂಸ್ಥೆಗಳ ಪಾತ್ರವೂ ಮುಖ್ಯವಾಗಿದೆ.

ಸಾರ್ವಜನಿಕರೂ ಮಳೆ ಕೊಯ್ಲಿನ ಬಗ್ಗೆ ಆಸಕ್ತಿ ತೋರಿಸಿದರೆ ಅಂತರ್ಜಲದ ಪರಿಸ್ಥಿತಿಯಲ್ಲಿ ಕೊಂಚ ಸುಧಾರಿಸಲು ಸಾಧ್ಯವಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಬೆಂಗಳೂರು ಮಹಾನಗರದಲ್ಲಿ ಕೆರೆಗಳನ್ನೇ ಒತ್ತುವರಿ ಮಾಡಿಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಭಾರೀ ಕಟ್ಟಡಗಳನ್ನು ನಿರ್ಮಿಸಿದೆ. ಈ ಕುರಿತು ರಾಮಸ್ವಾಮಿ ಆಯೋಗದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವರದಿಯನ್ವಯ ಹಿಂದಿನ ಸರಕಾರ ಹಲವು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ ಕೆರೆಗಳ ಪುನಃಶ್ಚೇತನಕ್ಕೆ ಕ್ರಮಕೈಗೊಂಡಿತ್ತು. ಆದರೂ ಆ ಕಾರ್ಯ ಪೂರ್ತಿಯಾಗಿ ನೆರವೇರಿಲ್ಲ. ಬೆಂಗಳೂರು ಮಾತ್ರವಲ್ಲದೆ ಅನೇಕ ನಗರಗಳಲ್ಲಿ ಭಾರೀ ಗಾತ್ರದ ಕೆರೆಗಳನ್ನು ರಿಯಲ್ ಎಸ್ಟೇಟ್ ಮಾಫಿಯಾ ಮಾತ್ರವಲ್ಲದೇ ಸರಕಾರದ ವಿವಿಧ ಇಲಾಖೆಗಳು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿವೆ. ಈ ರೀತಿ ಕೆರೆಗಳು ನಾಶವಾಗಿ ಹೋಗಿರುವುದರಿಂದ ಅಂತರ್ಜಲದ ಪ್ರಮಾಣ ಕಡಿಮೆಯಾಗಿದೆ. ಇನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೃಹತ್ ಗಾತ್ರದ ಕೆರೆಗಳು ಇದ್ದರೂ ಆ ಕೆರೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅವು ನಿಷ್ಪ್ರಯೋಜಕವಾಗಿವೆ. ಆ ಕೆರೆಗಳ ಹೂಳನ್ನು ತೆಗೆದು ಕೆರೆಗಳನ್ನು ಪುನಶ್ಚೇತನಗೊಳಿಸಿದರೆ ಅಂತರ್ಜಲದ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಕೊಳ್ಳಬಹುದು. ಆದರೆ ಅದಕ್ಕೆ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News