ಬಜೆಟ್‌ನಲ್ಲಿ ಕರಾವಳಿ ಭಾಗದ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಶಾಸಕರ ಪ್ರತಿಭಟನೆ

Update: 2018-07-06 13:11 GMT

ಬೆಂಗಳೂರು, ಜು. 6: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಮಂಡಿಸಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೊದಲ ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಕರಾವಳಿ ಭಾಗದ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಬೆಳಗ್ಗೆ ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಬಳಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು, ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

‘ನೀವು ದೇವರ ಆಶೀರ್ವಾದ ಪಡೆಯಲು ಕರಾವಳಿಯ ದೇಗುಲಗಳಿಗೆ ಬರ್ತೀರಿ. ಆದರೆ, ಆ ಪ್ರದೇಶದ ಅಭಿವೃದ್ಧಿಗೆ ನಿಮ್ಮ ಕೊಡುಗೆಯೇನು ಎಂದು ಪ್ರಶ್ನಿಸಿದ ಬಿಜೆಪಿ ಶಾಸಕ ಸುನೀಲ್‌ ಕುಮಾರ್, ಕರಾವಳಿ ಭಾಗದ ಜನರು ಜೆಡಿಎಸ್ ಪಕ್ಷಕ್ಕೆ ಮತ ನೀಡಿಲ್ಲ ಎಂಬ ಕಾರಣಕ್ಕೆ ಅನುದಾನ ನೀಡಿಲ್ಲವೇ ಎಂದು ಕೇಳಿದರು.

ರಾಜ್ಯಕ್ಕೆ ನೇತ್ರಾವತಿ, ಸ್ವರ್ಣ, ವರಾಹಿ ನೀಡಿದ ಕರಾವಳಿಗೆ ಬಜೆಟ್‌ನಲ್ಲಿ ನ್ಯಾಯ ನೀಡಿಲ್ಲ. ಧರ್ಮಸ್ಥಳ, ಕೊಲ್ಲೂರು, ಸುಬ್ರಹ್ಮಣ್ಯ, ಕೃಷ್ಣಮಠಗಳನ್ನು ಹೊಂದಿರುವ ಪುಣ್ಯಭೂಮಿ ಕರಾವಳಿಗೆ ಅನ್ಯಾಯವಾಗಿದೆ ಎಂದು ಸುನೀಲ್ ಕುಮಾರ್ ಇದೇ ವೇಳೆ ದೂರಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್.ಅಂಗಾರ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದ ಬಿಜೆಪಿ ಶಾಸಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News