ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿ ಶೀಘ್ರ ಬಿಡುಗಡೆ: ಸಚಿವ ಸಿ.ಪುಟ್ಟರಂಗಶೆಟ್ಟಿ

Update: 2018-07-06 14:16 GMT

ಬೆಂಗಳೂರು, ಜು.6: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015-16ನೆ ಸಾಲಿನಲ್ಲಿ ರಾಜ್ಯಾದ್ಯಂತ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಶೀಘ್ರವೆ ಬಿಡುಗಡೆ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ನಿಯಮ-72ರಡಿಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮೀಕ್ಷಾ ವರದಿ ಬಿಡುಗಡೆ ಸಂಬಂಧ ಈಗಾಗಲೆ ಒಂದು ಸಭೆ ನಡೆದಿದೆ. ಕೂಡಲೆ ಮತ್ತೊಂದು ಸುತ್ತಿನ ಸಭೆ ನಡೆಸಿ ಶೀಘ್ರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಕೆ.ಪಿ.ನಂಜುಂಡಿ, ಹಿಂದುಳಿದ ಜಾತಿ ಸಮುದಾಯದ ಪಟ್ಟಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಜಾತಿಗಳಿವೆ. ಆದರೆ, ಸರಕಾರದ ಸೌಲಭ್ಯ ಸಿಗುತ್ತಿರುವುದು ಕೇವಲ ಬೆರಳೆಣಿಕೆ ಜಾತಿಗಳಿಗೆ ಮಾತ್ರ. ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಹಲವು ಜಾತಿಗಳ ಹೆಸರು ನಾಗರಿಕ ಸಮಾಜದ ಕಿವಿಗೆ ಬಿದ್ದಿಲ್ಲವೆಂದು ಅವರು ವಿಷಾದಿಸಿದರು.

ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಬಿಂಗಿ, ಅಜ್ಞಾನಿ, ಗುಳ್ಳಿ ಸೇರಿದಂತೆ ಹಲವು ಹಿಂದುಳಿದ ಜಾತಿಗಳು ಅಜ್ಞಾತವಾಗಿಯೆ ಉಳಿದಿವೆ. ಆ ಸಮುದಾಯದ ಮಕ್ಕಳು ಶಿಕ್ಷಣವಂತರಾಗಿ ನಾಗರಿಕ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಈ ಜಾತಿಗಳ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿ ಶೀಘ್ರವೇ ಬಿಡುಗಡೆಯಾಗುವುದು ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.

ಇವರ ಮಾತಿಗೆ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ, ಬಿಜೆಪಿ ಸದಸ್ಯ ರವಿಕುಮಾರ್, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಧ್ವನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News